ಭಕ್ತಿಯಿಂದ ಜ್ಞಾನದ ಅರಿವು ಸಾಧ್ಯ: ಟಿ.ಎಲ್. ಆನಂದ್
ಚಿಂತಾಮಣಿ: ಆಕಳು ಬಂದರೆ ಅದರ ಹಿಂದೆಯೇ ಕರುವು ಬರುವಂತೆ, ಭಕ್ತಿ ಇದ್ದರೆ ತಾನಾಗಿಯೇ ಜ್ಞಾನವೂ ಬರುತ್ತದೆ. ಸಂತೃಪ್ತಿಯೇ ವೈರಾಗ್ಯದ ಲಕ್ಷಣ ಎಂದು ಪ್ರವಚನಕಾರ ತಳಗವಾರ ಟಿ.ಎಲ್. ಆನಂದ್ ಅಭಿಪ್ರಾಯಪಟ್ಟರು. ತಾಲೂಕಿನ ಕೈವಾರ ಗ್ರಾಮದ ಯೋಗಿನಾರೇಯಣ ಮಠದ ಸಭಾಂಗಣದಲ್ಲಿ ಬೆಂಗಳೂರಿನ ಇಸ್ಕಾನ್ ದೇವಾಲಯದ ವತಿಯಿಂದ ಆಯೋಜಿಸಲಾಗಿದ್ದ ಆಧ್ಯಾತ್ಮ ಶಿಬಿರದಲ್ಲಿ ಭಕ್ತಿಯ ಮಹತ್ವದ ಬಗ್ಗೆ ಉಪನ್ಯಾಸ ನೀಡಿ, ತುಂಬಾ ಲಾಭ ಆಯಿತು ಎಂದು ಯಾರೂ ಮಾರನೆ ದಿನ ಅಂಗಡಿ ಬಾಗಿಲು ಮುಚ್ಚುವುದಿಲ್ಲ. ಲಾಭ ಬಂದರೂ, ನಷ್ಟವಾದರೂ ಅಂಗಡಿ ಬಾಗಿಲು ತೆರೆದೆ ತೆರೆಯಬೇಕು. ಅದು ಮಾಲೀಕನ ಕರ್ತವ್ಯ. ಹಾಗೆ ಭಗವಂತನ ಸ್ಮರಣೆ ಮರೆಯದೆ ಮಾಡುತ್ತಿದ್ದರೆ ಮನಸ್ಸು ಶಾಂತವಾಗಿರುತ್ತದೆ ಎಂದರು. ಕನ್ನಡದ ಭಗವದ್ಗೀತೆ ಮಂಕುತಿಮ್ಮನ ಕಗ್ಗದ ಪದ್ಯಗಳನ್ನು ಉದಾಹರಿಸುತ್ತಾ, ಅಕ್ಕಿಯೊಳಗನ್ನವನು ಮೊದಲಾರು ಕಂಡವರು, ಅಕ್ಕರದ ಬರಹಕ್ಕೆ ಮೊದಲಿಗನದಾರು ಲೆಕ್ಕವಿರಿಸಿಲ್ಲ. ಜಗ ತನ್ನಾದಿ ಬಂಧುಗಳ ದಕ್ಕುವುದೆ ಜಸ ನಿನಗೆ ಎಂಬ ಉದಾಹರಣೆಗಳನ್ನು ತಿಳಿಸಿದರು. ಶಿಬಿರದ ಉಸ್ತುವಾರಿಯನ್ನು ಇಸ್ಕಾನ್ ದೇವಾಲಯದ ಶ್ರೀನಿವಾಸಪ್ರಭು ವಹಿಸಿದ್ದರು. ಮನೋಹರ್, ಮುಕುಂದ ಮುಂತಾದವರು ಉಪಸ್ಥಿತರಿದ್ದರು.