ಮತ್ತೊಬ್ಬರ ಜೀವ ಉಳಿಸಲು ರಕ್ತದಾನ ಮಾಡಿ
ಚಿಕ್ಕಬಳ್ಳಾಪುರ: ಬೇರೆಯವರ ಪ್ರಾಣ ಉಳಿಸುವಂತಹ ರಕ್ತದಾನ ಕಾರ್ಯಕ್ರಮಗಳ ಮೂಲಕ ಮಹಾನ್ ನಾಯಕರ ಜನ್ಮ ದಿನಾಚರಣೆ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ರಕ್ಷಣಾಧಿಕಾರಿ ದಿವ್ಯ ಗೋಪಿನಾಥ್ ಮೆಚ್ಚುಗೆ ವ್ಯಕ್ತಪಡಿಸಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಲಿತ ಸಂರಕ್ಷಣಾ ವೇದಿಕೆಯಿಂದ ಬಿ.ಆರ್. ಅಂಬೇಡ್ಕರ್ ಅವರ 123ನೇ ಜನ್ಮದಿನದ ಪ್ರಯುಕ್ತ ಏರ್ಪಡಿಸಿದ್ದ ರಕ್ತದಾನ ಶಿಬಿರ ಮತ್ತು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಅಂಬೇಡ್ಕರ್ ಕೇವಲ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿಲ್ಲ. ಆದರೆ, ಅಂಬೇಡ್ಕರ್ ದಿನಾಚರಣೆಯನ್ನು ಕೇವಲ ಕೆಲವೇ ವರ್ಗಗಳು ಮಾತ್ರ ಆಚರಿಸುತ್ತಿರುವಂತಹ ವಾತಾವರಣವಿರುವುದು ದುರದೃಷ್ಟಕರ ಎಂದರು. ಸಾಯಿಕೃಷ್ಣ ಚಾರಿಟಲ್ ಟ್ರಸ್ಟ್ನ ಪಿ.ಎನ್. ಕೇಶವರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ,ದಲಿತ ಸಂರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಕೆ.ವಿ.ವಿಜಯ್ ಕುಮಾರ್ , ಶಿಕ್ಷಣ ತಜ್ಞ ಕೋಡಿರಂಗಪ್ಪ, ಗ.ನ. ಅಶ್ವತ್ಥ ಇದ್ದರು.