ವೈದ್ಯರ ನಿರ್ಲಕ್ಷ್ಯಕ್ಕೆ ತಾಯಿ, ಮಗು ಬಲಿ
ಚಿಂತಾಮಣಿ: ಧರ್ಮಾಸ್ಪತ್ರೆಗೆ ಹೆರಿಗೆಗೆ ಬಂದಿದ್ದ ಮಹಿಳೆಗೆ ಸರಿಯಾದ ಚಿಕಿತ್ಸೆ ದೊರೆಯದ ಕಾರಣ ತಾಯಿ ಮತ್ತು ಮಗು ಮೃತಪಟ್ಟಿದ್ದಾರೆಂದು ಆರೋಪಿಸಿ, ವೈದ್ಯಾಧಿಕಾರಿ ಡಾ.ಜಯಂತಿ ವಿರುದ್ಧ ಮೃತಳ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆ ಮುಂಭಾಗ ಶವವಿಟ್ಟು ಶನಿವಾರ ಪ್ರತಿಭಟನೆ ನಡೆಸಿದರು.
ನಗರದ ಬೊಂಬು ಬಜಾರಿನ ನಿವಾಸಿ ಸಂಜೀವರಾಯರ ಮಗಳಾದ 24 ವರ್ಷ ವಯಸ್ಸಿನ ಲಕ್ಷ್ಮಿ ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಜಯಂತಿ ರವರ ಬಳಿ ಕಳೆದ 2 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶನಿವಾರ ಡಾ. ಜಯಂತಿ ಹೆರಿಗೆ ಸಮಯದಲ್ಲಿ ಹಣಕ್ಕಾಗಿ ಪೀಡಿಸಿ ಸರಿಯಾಗಿ ಚಿಕಿತ್ಸೆ ನೀಡದೆ, ನಿರ್ಲಕ್ಷ್ಯೆ ತೋರಿದ ಪರಿಣಾಮ ಲಕ್ಷ್ಮಿ ಹೆರಿಗೆ ಸಮಯದಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಆಕ್ರಂದನ: ತಾಯಿ ಮಗು ಸಾವನ್ನಪ್ಪಿದ ಸುದ್ದಿ ತಿಳಿದ ತಕ್ಷಣ ಸಂಬಂದಿಕರು ಹಾಗೂ ನೂರಾರು ಜನರು ಆಸ್ಪತ್ರೆಯ ಮುಂಭಾಗದಲ್ಲಿ ಸೇರಿ ವೈದ್ಯರ ವಿರುದ್ಧ ದಿಕ್ಕಾರ ಕೂಗಿದರು. ಮಹಿಳೆಯ ಸಾವಿಗೆ ಕಾರಣರಾದ ವೈದ್ಯರನ್ನು ಅಮಾನತುಪಡಿಸಿ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿ ಶವವನ್ನು ಮುಂದಿಟ್ಟುಕೊಂಡು ಧರಣಿ ಕುಳಿತಿದ್ದಾರೆ.
ಶಾಸಕ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಶಾಸಕ ಜೆ.ಕೆ.ಕೃಷ್ಣಾರೆಡಡ್ಡಿ ಭೇಟಿ ನೀಡಿ, ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ, ವಾರದೊಳಗೆ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.