ಶ್ರೀನಿವಾಸಪುರ ಹಳ್ಳಿಗಳಿಗೆ ಸಂಪರ್ಕ ರಸ್ತೆ
ಕನ್ನಡಪ್ರಭ ವಾರ್ತೆ ಕೋಲಾರ ಜು.5
ಶ್ರೀನಿವಾಸಪುರ ತಾಲೂಕಿನ ಎಲ್ಲಾ ಹಳ್ಳಿಗಳಿಗೆ ಸರ್ವಋತು ಸಂಪರ್ಕ ರಸ್ತೆಯ ಸೌಕರ್ಯ ಕಲ್ಪಿಸುವುದಕ್ಕೆ ಸಂಕಲ್ಪ ಮಾಡಿರುವುದಾಗಿ ಶಾಸಕ ಕೆ.ಆರ್. ರಮೇಶ್ ಕುಮಾರ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶ್ರೀನಿವಾಸಪುರ ಕ್ಷೇತ್ರದಲ್ಲಿ ರಸ್ತೆಗಳ ಅಭಿವೃದ್ಧಿಗಾಗಿ 12 ಕೋಟಿ ರು. ಬಿಡುಗಡೆ ಆಗಿದ್ದು ಕಾಮಗಾರಿಗಳಿಗೆ ಟೆಂಡರ್ ಆಗಿ ಕೆಲಸ ಪ್ರಾರಂಭವಾಗಿದೆ. 9 ಹೊಸ ರಸ್ತೆಗಳಿಗೆ ಹೆಚ್ಚುವರಿ 17.50 ಕೋಟಿ ಮಂಜೂರು ಆಗಿ ಟೆಂಡರ್ ಪ್ರಕ್ರಿಯೆ ಆರಂಭಗೊಂಡಿದೆ ಎಂದರು.
ಶ್ರೀನಿವಾಸಪುರ ಕ್ಷೇತ್ರ ಅತ್ಯಂತ ಹಿಂದುಳಿದ ಕ್ಷೇತ್ರವೆಂಬ ಕಾರಣಕ್ಕೆ ಸರ್ಕಾರದ ಮೇಲೆ ಒತ್ತಡ ತಂದು ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಸರ್ಕಾರ ಮಂಜೂರು ಮಾಡಿದೆ ಎಂದರು. ಬೆಂಗಳೂರಿನಿಂದ ಚಿಂತಾಮಣಿ ಮಾರ್ಗವಾಗಿ ಮದನಪಲ್ಲಿ ಗಡಿವರೆವಿಗೂ ಹೋಗುವ ರಸ್ತೆ ಈಗಾಗಲೇ ಕೆ.ಶಿಫ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ಮಾಡಿಕೆರೆ ಕ್ರಾಸ್ ವರೆಗೆ ಕೈಗೊತ್ತಿಕೊಂಡಿರುತ್ತದೆ.ಗ ಮಾಡಿಕೆರೆ ಕ್ರಾಸ್ನಿಂದ ಆಂಧ್ರದ ಗಡಿವರೆಗೆ ಎಡಿಬಿ-3ರಲ್ಲಿ ವಿಶ್ವ ಬ್ಯಾಂಕ್ ನೆರವಿನಿಂದ ಕೆ.ಶಿಫ್ ನವರು ಕೈಗೆತ್ತಿಕೊಳ್ಳಲು ರಾಜ್ಯ ಸರ್ಕಾರ ಆದೇಶಿಸಿದೆ ಎಂದು ಹೇಳಿದರು.
ಶ್ರೀನಿವಾಸಪುರ ಪಟ್ಟಣದ ಮಧ್ಯಭಾಗದಲ್ಲಿ ಸಂಚಾರದ ದಟ್ಟಣೆಯನ್ನು ನಿವಾರಿಸಿ ವರ್ತುಲ ರಸ್ತೆಯನ್ನು ನಿರ್ಮಿಸಲು ಪಿಬ್ಯ್ಲುಡಿಮತ್ತು ಎನ್.ಹೆಚ್. ಎರಡೂ ಇಲಾಖೆಗಳು ಪ್ರತ್ಯೇಕ ಅಂದಾಜುಗಳನ್ನು ಮಾಡಿ ಸುಮಾರು 60 ಕೋಟಿ ವೆಚ್ಚದಲ್ಲಿ ಈ ಕೆಲಸ ಪ್ರಾರಂಭಿಸಲು ಎಲ್ಲಾ ಸಿದ್ಧತೆ ನಡೆದಿದೆ ಎಂದು ತಿಳಿಸಿದರು.
ಪಿಎಂಜಿವೈಎಸ್ 2ನೇ ಹಂತದಲ್ಲಿ 13.8 ಕಿಮೀ ರಸ್ತೆಗೆ 6 ಕೋಟಿ ಕೆಲಸ ನಡೆಯುತ್ತಿದೆ, ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆ ಅಡಿಯಲ್ಲಿ 25 ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 30 ಕಿಮಿಗೆ 11 ಕೋಟಿ ರು. ವೆಚ್ಚದ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು. ವರ್ತುಲ ರಸ್ತೆ ಕಾಮಗಾರಿ ಪೂರ್ಣಗೊಳಿಸಲು 6 ತಿಂಗಳು ಬೇಕು. ಕ್ಷೇತ್ರದ ರಸ್ತೆಗಳ ಸಮಗ್ರ ನಕ್ಷೆಯನ್ನು ತಯಾರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಕ್ಷೇತ್ರದ ಎಲ್ಲಾ ಹಳ್ಳಿಗಳಿಗೆ ಸಂಪರ್ಕ ರಸ್ತೆ ನಿರ್ಮಿಸುವುದು ನಾಗರಿಕತೆ ಸಂಕೇತವೆಂದು ಅಭಿಪ್ರಾಯಪಟ್ಟರು.
ನೀರಿನ ಯೋಜನೆ: ಕಳೆದ ಒಂದು ವರ್ಷದಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ನೀರು ಒದಗಿಸಲು 372 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಇದರಲ್ಲಿ 235ರಲ್ಲಿ ನೀರು ಸಿಕ್ಕಿದ್ದು 137 ವಿಫಲವಾಗಿವೆ. ಕ್ಷೇತ್ರಕ್ಕೆ ಸೇರಿದ ಸುಗಟೂರು ಮತ್ತು ಹೋಳೂರು ಹೋಬಳಿಯಲ್ಲಿ 208 ಕೊಳವೆ ಬಾವಿಗಳನ್ನು ಕೊರೆಸಿದ್ದು 125 ಸಫಲವಾಗಿ 83 ವಿಫಲವಾಗಿದೆ. ನೀರು ಸಿಕ್ಕಿರುವ ಕೊಳವೆ ಬಾವಿಗಳಿಗೆ ಪಂಪು ಮೋಟಾರ್ ಅಳವಡಿಸುವ ಕಾರ್ಯ ಶೇ.80 ರಷ್ಟು ಮುಗಿದಿದೆ. ಒಟ್ಟು 29 ಹಳ್ಳಿಗಳಿಗೆ ಈಗಾಗಲೇ ನೀರು ಒದಗಿಸಲಾಗುತ್ತಿದೆ ಎಂದು ವಿವರಿಸಿದರು.
ಆಂದೋಲನ: ಕೆರೆಗಳ ಅಭಿವೃದ್ಧಿಗಾಗಿ ಹಾಗೂ ನಿರುಪದ್ರವ್ಯ ಗಿಡಗಳ ನಾಶಕ್ಕಾಗಿ ಕಾಲೇಜು ವಿದ್ಯಾರ್ಥಿಗಳನ್ನು ಬಳಸಿಕೊಂಡು ಆಂದೋಲನ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಕೋಲಾರದ ಕೋಡಿ ಕಣ್ಣೂರು ಕೆರೆ ನನ್ನ ಕ್ಷೇತ್ರ ವ್ಯಾಪ್ತಿಗೆ ಸೇರದಿದ್ದರೂ ಈ ಕೆರೆಯನ್ನು ಅಭಿವೃದ್ಧಿಪಡಿಸಲು ಇಚ್ಚಿಸಿದ್ದೇನೆ. ಕಸದ ತೊಟ್ಟಿಯಾಗುತ್ತಿರುವ ಮರಳು ದಂಧೆಕೋರರ ಕೈಗೆ ಸಿಕ್ಕಿ ನಲುಗಿರುವ ಕೆರೆಗೆ ಮರು ಜೀವ ನೀಡಬೇಕೆಂಬುದು ನನ್ನ ಸದಾಶಯವಾಗಿದೆ ಎಂದು ಹೇಳಿದರು.ಮಳೆ ನೀರಿನ ಸಮಗ್ರ ಹಾಗೂ ಅಂತರ್ಜಲ ಅಭಿವೃದ್ಧಿಗಾಗಿ 25 ಚೆಕ್ ಡ್ಯಾಮ್ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಎತ್ತಿನಹೊಳೆ ಯೋಜನೆ ಅನುಷ್ಠಾನದ ಬಗ್ಗೆ ಯಾರು ಏನೇ ಹೇಳಿದರೂ ಯೋಜನೆ ಜಾರಿ ಖಚಿತ, ಮಳೆಗಾಲದಲ್ಲಿ ಸಮುದ್ರ ಸೇರುವ ಶೇ.0.6ರಷ್ಟು ನೀರನ್ನು ಮಾತ್ರ ಬಯಲುಸೀಮೆ ಜಿಲ್ಲೆಗಳಿಗೆ ಬಳಕೆ ಮಾಡಲಾಗುತ್ತದೆ ಎಂಬುದನ್ನು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.
ಮೆಡಿಕಲ್ ಕಾಲೇಜು: ಶ್ರೀನಿವಾಸಪುರದ ಸರ್ಕಾರಿ ಆಸ್ಪತ್ರೆಯನ್ನು 150 ಹಾಸಿಗೆಗಳಿಂದ 350 ಹಾಸಿಗೆಗಳಿಗೆ ಮೇಲ್ದರ್ಜೆಗೇರಿಸಲಾಗಿದೆ. ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಸಿಎಂ ಕ್ಷೇತ್ರಕ್ಕೆ ಭೇಟಿ ನೀಡಿದ್ದಾಗ ಘೋಷಣೆ ಮಾಡಿದ್ದರು. ಸಿಎಂ ಷರತ್ತಿನ ಪ್ರಕಾರ 350 ಹಾಸಿಗೆಗಳ ಆಸ್ಪತ್ರೆಯಾಗಿದೆ. ಇದನ್ನು ನೆನವು ಮಾಡಿ ಮುಂದಿನ ವರ್ಷ ಮೆಡಿಕಲ್ ಕಾಲೇಜು ಪ್ರಾರಂಭಕ್ಕೆ ಸಿದ್ಧತೆ ಮಾಡಲಾಗುವುದೆಂದು ಹೇಳಿದರು.