ಸಕಾಲಕ್ಕೆ ಮರುಪಾವತಿಸಿ
ಶಿಡ್ಲಘಟ್ಟ: ಸಹಕಾರ ಸಂಘಗಳಿಂದ ಪಡೆಯುವ ಸಾಲವನ್ನು ಸದ್ಬಳಕೆ ಮಾಡಿಕೊಂಡು ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಿ, ಸಹಕಾರಿ ಸಂಘವನ್ನು ಅಭಿವೃದ್ಧಿಗೆ ತರಬೇಕು ಎಂದು ಸಂಸದ ಕೆ.ಹೆಚ್. ಮುನಿಯಪ್ಪ ಹೇಳಿದರು.
ತಾಲೂಕಿನ ಜಂಗಮಕೋಟೆಯಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘ ನಿಯಮಿತದಿಂದ ಹಿರೇಬಲ್ಲ ಶಾಖಾ ಕಟ್ಟಡ ಶಂಕುಸ್ಥಾಪನೆ, ಹಾಗೂ ಸಂಘದ ಸದಸ್ಯರಿಗೆ ಕೆಸಿಸಿ ಸಾಲ ಮತ್ತು ಮಧ್ಯಮಾವಧಿ ಸಾಲ ವಿತರಣಾ ಸಮಾರಂಭವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ತ್ವರಿತವಾಗಿ ಸಾಲಗಳನ್ನು ಮಂಜೂರು ಮಾಡಿಕೊಡಲು ಸಹಕಾರಿ ಬ್ಯಾಂಕುಗಳಿಗೆ ಸಾಧ್ಯ ಎಂದರು.
ಎತ್ತಿನಹೊಳೆ ಯೋಜನೆ: ಬಯಲು ಸೀಮೆ ಭಾಗಗಳಿಗೆ ನೀರಾವರಿ ಯೋಜನೆಯನ್ನು ಜಾರಿಗೆ ತರುವಂತಹ ವಿಚಾರದಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು, 24 ಟಿಎಂಸಿ ನೀರು ಎತ್ತಿನಹೊಳೆ ಯೋಜನೆಯಲ್ಲಿ ತರುವುದಾಗಿ ಶಂಕುಸ್ಥಾಪನೆ ನೆರವೇರಿಸಲಾಗಿದೆ.
ನೀರು ಬರುವುದನ್ನು ಈ ಭಾಗದ ಶಾಸಕರು, ಸಂಸದರು, ನೀರಾವರಿ ಹೋರಾಟಗಾರರಿಗೆ, ಮಾಧ್ಯಮಗಳಿಗೆ ಸ್ಪಷ್ಟವಾಗಿ ತಿಳಿಸಬೇಕು. ನೀರು ಬರುವಂತಹ ರೂಪುರೇಷೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ. ವಿಧಾನಸಭೆಯ ಅಧಿವೇಶನ ಮುಗಿಯುವಷ್ಟರಲ್ಲಿ ಸಭೆ ಕರೆದು ವಿವರಣೆ ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.
ಠೇವಣಿ ಇಡಲಿ: ಸಹಕಾರಿ ಬ್ಯಾಂಕಿನ ಜಿಲ್ಲಾಧ್ಯಕ್ಷ ಬ್ಯಾಲಹಳ್ಳಿ ಗೋವಿಂದೇಗೌಡ ಮಾತನಾಡಿ ವೈದ್ಯನಾಥನ್ ಅವರ ವರದಿಯಿಂದಾಗಿ ನೂರು ಕೋಟಿ ರೂಪಾಯಿಗಳನ್ನು ನೀಡಿ ದಿವಾಳಿ ಅಂಚಿನಲ್ಲಿದ್ದ ಸಹಕಾರಿ ಬ್ಯಾಂಕುಗಳನ್ನು ಮೇಲೆತ್ತಲು ಸಹಾಯವಾಗಿದೆ. 33 ಕೋಟಿ ಹಣ ಬರಬೇಕಾಗಿದೆ. ಸರ್ಕಾರದಿಂದ ಬರುವಂತಹ 13 ನೇ ಹಣಕಾಸಿನ ಯೋಜನೆಯ ಹಣವನ್ನು ನಮ್ಮ ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಬ್ಯಾಂಕುಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಶಾಸಕ ಎಂ.ರಾಜಣ್ಣ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಎಲ್ಲರ ಸಹಕಾರ ಇದ್ದರೆ ಮಾತ್ರ ಅಭಿವೃದ್ಧಿಸಾದ್ಯವಾಗುತ್ತದೆ. ಸಹಕಾರಿ ಸಂಘ ಕೆಟ್ಟ ಪರಿಣಾಮವನ್ನು ಎದುರಿಸುವಂತಹ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೆರವಿನಿಂದ ಪುನಶ್ಚೇತನ ಹೊಂದಿದೆ. ಸಹಕಾರಿ ಸಂಘದಲ್ಲಿ ಪಡೆದ ಸಾಲವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಶಾಸಕ ಎಂ.ರಾಜಣ್ಣ, ಕೋಮುಲ್ ನಿರ್ದೇಶಕ ಮುನಿಯಪ್ಪ, ಜಿಲ್ಲಾ ಪಂಚಾಯ್ತಿ ಸದಸ್ಯ ಕಂಬದಹಳ್ಳಿ ಸತೀಶ್, ಡಿಸಿಸಿ ಬ್ಯಾಂಕ್ ನಿರ್ದೇಕರಾದ ಶಿವಾರೆಡ್ಡಿ, ಪಿ.ವಿ.ನಾಗರಾಜ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶಪ್ಪ, ನಹಾವಿಸ ಸಂಘದ ಅಧ್ಯಕ್ಷ ಕೆ.ಗುಡಿಯಪ್ಪ, ಸಹಕಾರ ಸಂಘದ ಅಧ್ಯಕ್ಷ ಹೀರೆಬಲ್ಲ ರವಿಕುಮಾರ್, ತಾಲೂಕು ಪಂಚಾಯ್ತಿ ಅಧ್ಯಕ್ಷ ನರಸಿಂಹಮೂರ್ತಿ, ಸದಸ್ಯ ಚನ್ನಕೃಷ್ಣ, ಗ್ರಾ.ಪಂ.ಉಪಾಧ್ಯಕ್ಷ ಜೆ.ಎಂ.ವೆಂಕಟೇಶ್, ವ್ಯವಸ್ಥಾಪಕ ಆರ್. ಲಿಂಗರಾಜು, ತಾದೂರು ರಮೇಶ್, ಮುಂತಾದವರು ಹಾಜರಿದ್ದರು.