ಕೃಷಿ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ಕೃಷಿ ಮಾಡಲು ಸಲಹೆ
ಗೌರಿಬಿದನೂರು: ರೈತರು ಕೃಷಿ ಇಲಾಖೆ ಅಧಿಕಾರಿಗಳ ಸಲಹೆ ಪಡೆದು ಬೇಸಾಯ ಚಟುವಟಿಕೆ ಕೈಗೊಳ್ಳಬೇಕೆಂದು ಡೆಪ್ಯೂಟಿ ಸ್ಪೀಕರ್ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು. ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಬೇಸಾಯ ಮಾಡುವ ಸಮಯದಲ್ಲಿ ಅವಘಡಗಳಿಂದ ರೈತರ ವಾರಸುದಾರರಿಗೆ ಪರಿಹಾರ ಹಣದ ಚೆಕ್ ವಿತರಣೆ ಮಾಡಿ ಮಾತನಾಡಿ, ಜಮೀನಿನ ಮಣ್ಣು ಪರೀಕ್ಷೆ, ಬಿತ್ತನೆ, ಕೀಟ ನಾಶಕಗಳ ಸಿಂಪಡಣೆ, ರಸಗೊಬ್ಬರಗಳ ಬಳಕೆ ಮುಂತಾದ ಕೃಷಿ ಸಂಬಂಧಿತ ಮಾಹಿತಿ ರೈತರು ಕೃಷಿ ಇಲಾಖೆಯಿಂದ ಪಡೆದು ನಿರ್ವಹಿಸಬೇಕು ಎಂದರು. ಕೃಷಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ರೈತರಿಗೆ ಕೃಷಿ ಸಂಬಂಧಿತ ಮಾಹಿತಿ ನೀಡಬೇಕು. ಜೊತೆಗೆ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ಅರ್ಹ ರೈತರಿಗೆ ಸವಲತ್ತು ದೊರೆಯುವಂತೆ ಮಾಡಬೇಕೆಂದು ಎಂದರು.ಜಿಪಂ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಮಾತನಾಡಿ, ಮಳೆಗಾಲ ಪ್ರಾರಂಭವಾಗಿರುವುದರಿಂದ ಕೃಷಿ ಅಧಿಕಾರಿಗಳು ಬಿತ್ತನೆ ಬೀಜ, ರಸಗೊಬ್ಬರಗಳನ್ನು ಅಗತ್ಯವಾಗಿರುಷ್ಟು ದಾಸ್ತಾನು ಮಾಡಿಟ್ಟುಕೊಳ್ಳಬೇಕು. ಇದರಿಂದ ಬಿತ್ತನೆಯ ಸಮಯದಲ್ಲಿ ಅನಗತ್ಯ ಒತ್ತಡಗಳನ್ನು ನಿವಾರಿಸಬಹುದಾಗಿದೆ ಎಂದರು. ಸಹಾಯಕ ಕೃಷಿ ನಿರ್ದೇಶಕ ಬಿ. ವೆಂಕಟರಾಮಪ್ಪ ಮಾತನಾಡಿದರು. ನಾಗರಾಜು, ರಾಘವೇಂದ್ರ ಹನುಮಾನ್, ಬೊಮ್ಮಣ್ಣ ಇದ್ದರು.