ಗಮನ ಸೆಳೆದ ಚಿಕ್ಕಕುಂತೂರು ಸಂತೆ
ಟೇಕಲ್ ಲಕ್ಷ್ಮೀಶ್
ಟೇಕಲ್: ಗ್ರಾಮೀಣ ಸೊಗಡಿನ ಒಂದು ಭಾಗವೇ ಸಂತೆಗಳು ಎನ್ನಬಹುದು. ಇದಕ್ಕೆ ಉದಾಹರಣೆಯಾಗಿ ಗ್ರಾಮೀಣ ಸಂತೆ ಮಾಲೂರು ತಾಲೂಕಿನ ಚಿಕ್ಕಕುಂತೂರಿನ ಶನಿವಾರದ ಕುರಿ, ಕೋಳಿಗಳ ಸಂತೆ ದಕ್ಷಿಣ ಭಾರತದಲ್ಲೇ ಒಂದಾಗಿದೆ.
ಇಲ್ಲಿ ಪ್ರತಿ ಶನಿವಾರ ಬೆಳಿಗ್ಗೆ 7ಗಂಟೆಯಿಂದ ಮಧ್ಯಾಹ್ನ 1ಗಂಟೆಯೊಳಗೆ ತಮಿಳುನಾಡು, ಆಂಧ್ರ, ಕರ್ನಾಟಕದಿಂದ ಬರುವ ವ್ಯಾಪಾರಸ್ಥರು ಉತ್ತಮ ಕುರಿ ಹಾಗೂ ನಾಟಿಕೋಳಿ ಹಾಗೂ ಮೇಕೆಗಳನ್ನು ಖರೀದಿಸುತ್ತಾರೆ.
ಅನುಕೂಲಕರ ಸ್ಥಳ: ಇಲ್ಲಿ ಸುಮಾರು 3 ರಿಂದ 5 ಸಾವಿರ ಕುರಿಗಳು, 4 ರಿಂದ 5 ಸಾವಿರ ಕೋಳಿಗಳು, 500ಕ್ಕೂ ಹೆಚ್ಚು ಮೇಕೆಗಳು ಪ್ರತಿ ಶನಿವಾರ ಮಾರಾಟವಾಗುತ್ತದೆ. ಇಲ್ಲಿ ಸ್ವಂತ ಬಳಕೆಗೂ ಕೂಡ ಕೋಳಿಯನ್ನು ಕೊಂಡುಕೊಳ್ಳುತ್ತಾರೆ. ಕೋಲಾರದಿಂದ 25 ಕಿ.ಮೀ. ದೂರ ಹಾಗೂ ತಾಲೂಕು ಕೇಂದ್ರವಾದ ಮಾಲೂರಿನಿಂದ 7 ಕಿ.ಮೀ. ದೂರವಿರುವ ಕುಂತೂರು ಸಂತೆಯ ಸ್ಥಳ ರಸ್ತೆಯ ಪಕ್ಕದಲ್ಲೇ ಇರುವುದರಿಂದ ಬಹುತೇಕ ವ್ಯಾಪಾರಸ್ಥರಿಗೆ ತಮ್ಮ ವಾಹನಗಳನ್ನು ತಂದು ಅದರಲ್ಲಿ ಕುರಿ, ಕೋಳಿಗಳನ್ನು ತುಂಬಿಕೊಂಡು ಹೋಗಲು ಸೂಕ್ತ ಸ್ಥಳವಾಗಿದೆ.
ವಿವಿಧೆಡೆಯ ವ್ಯಾಪಾರಿಗಳು: ಆದರೆ ಗ್ರಾ.ಪಂ. ಇತ್ತಕಡೆ ಸ್ವಲ್ಪ ಸ್ವಚ್ಛತೆ ಕಡೆ ಗಮನಹರಿಸಬೇಕಾಗಿದೆ. ಬಹುತೇಕ ಬೆಂಗಳೂರು ನಗರದ, ಶಿವಾಜಿನಗರ, ಟ್ಯಾನರಿ ರೋಡ್ ಮತ್ತು ಮಾರುಕಟ್ಟೆಯ ಬಹುತೇಕ ಕಡೆ ಕುಂತೂರು ಕುರಿಗಳ ಮಾಂಸ ಹೆಚ್ಚು ಮಾರಾಟವಾಗುತ್ತಿವೆ. ತಮಿಳುನಾಡಿನ ಹೊಸೂರು, ಡೆಂಕಣಿಕೋಟೆ, ಆಂಧ್ರದ ಮದನಪಲ್ಲಿ, ರೋಜರ್ಪಲ್ಲಿ, ಕುಪ್ಪಂ ಹಾಗೂ ಕರ್ನಾಟಕದ ಬೆಂಗಳೂರು, ಶ್ರೀನಿವಾಸಪುರ, ವರ್ತೂರು, ಮುಳಬಾಗಿಲು ಇನ್ನೂ ಮುಂತಾದ ಕಡೆಯಿಂದ ವ್ಯಾಪಾರಸ್ಥರು ಬಂದು ವ್ಯಾಪಾರ ಮಾಡಿ ತೆಗೆದುಕೊಂಡು ಹೋಗುತ್ತಾರೆ.