ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಕ್ರಮ
ಮುಳಬಾಗಲು: ತಾಲೂಕಿನಲ್ಲಿರುವ ಮುಖ್ಯರಸ್ತೆಗಳ ಅಭಿವೃದ್ಧಿ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಯನ್ನು ಇನ್ನೊಂದು ವರ್ಷದಲ್ಲಿ ಪೂರ್ತಿಗೊಳಿಸಲಾಗುವುದೆಂದು ಶಾಸಕ ಕೊತ್ತೂರು ಮಂಜುನಾಥ್ ನುಡಿದರು.
ತಾಲೂಕಿನ ಕನ್ನಸಂದ್ರ ಗೇಟ್ನಿಂದ ಕುಪ್ಪಂಪಾಳ್ಯವರೆಗೆ ರು. 2ಕೋಟಿ ವೆಚ್ಚದಲ್ಲಿ ಓಆರ್ಎಫ್ ಯೋಜನೆಯಡಿ 8 ಕಿ.ಮೀ. ರಸ್ತೆ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ರಾಜಿ ಇಲ್ಲ: ಹಿಂದಿನ ಅವಧಿಯಲ್ಲಿ ರಸ್ತೆ ಕಾಮಗಾರಿಗಳು ಕಳಪೆಯಿಂದ ಕೂಡಿತ್ತು. ಆದರೆ ಈಗ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಮಾಡದಿದ್ದರೆ ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದರು. ಕಾಮಗಾರಿ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಯಾರೇ ಅಧಿಕಾರಿಗಳ ಅಥವಾ ಗುತ್ತಿಗೆದಾರರ ಬಳಿ ಕಮಿಷನ್ ಪಡೆಯದೇ ಸರ್ಕಾರದ ನಿಯಮಗಳ ಪ್ರಕಾರ ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗಳನ್ನು ಸಮರ್ಪಕ ರೀತಿಯಲ್ಲಿ ಮಾಡುವಂತೆ ಈಗಾಗಲೇ ಅದೇಶ ಮಾಡಲಾಗಿದೆ ಎಂದರು. ಮುಳಬಾಗಲಿನಿಂದ ಬಂಗಾರುಪೇಟೆಯ ಬಂಗಾರು ತಿರುಪತಿವರೆಗಿನ ರಸ್ತೆ ಕಾಮಗಾರಿ ನಡೆಯುತ್ತಿದ್ದು ಪ್ರಗತಿಯಲ್ಲಿದೆ ಎಂದರು. ರೆಡ್ಡಿಹಳ್ಳಿಯಿಂದ ಮೋತಕಪಲ್ಲಿ, ಬೈಪಲ್ಲಿ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ. ಗೋಕುಂಟೆ, ರಾಮಸಮುದ್ರ ರಸ್ತೆ ಅಭಿವೃದ್ಧಿ ಹಾಗೂ ಕಿರುಮಣೆಯಿಂದ ಹೆಬ್ಬಣೆ ಬಾರ್ಡರ್ವರೆಗೆ ಹಾಗೂ ಬೈರಕೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದರು.
ಟ್ಯಾಂಕರ್ ನೀರು: ತಾಲೂಕಿನಲ್ಲಿ ನೀರಿನ ಸಮಸ್ಯೆ ಹೆಚ್ಚಾದಾಗ ತಾತ್ಕಲಿಕವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ. ಇದರೊಂದಿಗೆ ಅಗತ್ಯವಿರುವ ಕಡೆ ಕೊಳವೆ ಬಾವಿ ಆಳವಡಿಸಿ ತಕ್ಷಣ ನೀರು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.
ಜಿ. ರಾಮಲಿಂಗಾರೆಡ್ಡಿ, ಎಂ.ಸಿ. ನೀಲಕಂಠೇ ಗೌಡ, ರಾಜೇಂದ್ರಗೌಡ, ಹಿರಿಯ ಮುಖಂಡ ವಿ. ವೆಂಕಟಮುನಿ, ಹಿರಿಯ ಮುಖಂಡರಾದ ಉತ್ತನೂರು ಶ್ರೀನಿವಾಸ್, ಕಲ್ಲುಪಲ್ಲಿ ಪ್ರಕಾಶ್, ನಾಗರಾಜ್ ರೆಡ್ಡಿ, ಯಾಮಣ್ಣ, ಪುರಸಭೆ ಸದಸ್ಯ ಗೋಪಿ, ಕುರುಬರಪೇಟೆ ಬಾಬು, ಮೆಕಾನಿಕ್ ಶ್ರೀನಿವಾಸ್, ಕಾರು ಶ್ರೀನಿವಾಸ್, ವಿನೋದ್, ಗೊಟ್ಟುಕುಂಟೆ ಕೃಷ್ಣ, ಜಮ್ಮನಹಳ್ಳಿ ಕೃಷ್ಣ, ಬೈರಕೂರು ರಾಮಾಂಜಿ, ಮನೋಹರ್, ರೆಡ್ಡಹಳ್ಳಿ ಮಹೇಶ್ ಭಾಗವಹಿಸಿದ್ದರು.