ಗುರುಪೌರ್ಣಿಮೆ ಉತ್ಸವ 10ಕ್ಕೆ
ಶಿಡ್ಲಘಟ್ಟ: ತಾಲೂಕಿನ ಮಳ್ಳೂರು ಸಮೀಪದ ಸಾಯಿನಾಥ ಜ್ಞಾನ ಮಂದಿರದಲ್ಲಿ ಈ ಬಾರಿ ಗುರುಪೌರ್ಣಿಮಾ ಉತ್ಸವವನ್ನು ವೈವಿಧ್ಯವಾಗಿ ಆಚರಿಸಲು ಸಿದ್ಧತೆ ನಡೆದಿದೆ. ದಿನಾಂಕ 10ರಿಂದ 12ರವರೆಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶ್ರೀ ಸಾಯಿ ಸಂಕೀರ್ತನಾ ಕಾರ್ಯಕ್ರಮಗಳನ್ನು ಆಯಾ ಗ್ರಾಮಗಳಲ್ಲಿನ ಭಜನಾ ತಂಡಗಳ ಸಹಕಾರದೊಂದಿಗೆ ನಡೆಸಿಕೊಡಲಾಗುವುದು. 10ರಂದು ಅಖಂಡ ಶ್ರೀರಾಮ ಕೋಟಿ ಭಜನೆ ಹಮ್ಮಿಕೊಳ್ಳಲಾಗಿದೆ. ಶುಕ್ರವಾರ ಶ್ರೀರಾಮ ತಾರಕ ಹೋಮ, ದತ್ತಾತ್ರೇಯ ಹೋಮ ಹಾಗೂ ಸಾಯಿ ಹೋಮಗಳನ್ನು ನಡೆಸಿಕೊಡಲಾಗುವುದು. ಶನಿವಾರದಂದು ಗುರುಪೌರ್ಣಿಮಾ ಅಂಗವಾಗಿ ಮುಂಜಾನೆ ಕಾಕಡಾರತಿ, ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಮಧ್ಯಾಹ್ನ ಪ್ರೌಢಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಸುಬ್ರಮಣ್ಯ ಸ್ವಾಮಿ ಆಶೀರ್ವವಚನ ನೀಡುವರು. ನೈರುತ್ಯ ರೇಲ್ವೆ ವಿಭಾಗೀಯ ಹಿರಿಯ ಕಾರ್ಮಿಕ ಅಧಿಕಾರಿ ಲಿಲ್ಲಿ ಪಾಂಡೆ ಅಧ್ಯಕ್ಷತೆ ವಹಿಸುವರು. ನೈರುತ್ಯ ರೇಲ್ವೆ ವಿಭಾಗೀಯ ಅಧಿಕಾರಿ ಡಿಪಿಒ ಶಿವಣ್ಣ ಹಾಗೂ ಬೆಂಗಳೂರು ಸಂಚಾರಿ ಡಿಸಿಪಿ ಕಚೇರಿ ಹಿರಿಯ ಅಧಿಕಾರಿ ಆರ್. ಮಂಜುಳ ಹಾಗೂ ಸ್ವಾಮಿ ವಿವೇಕಾನಂದ ಕಾಲೇಜಿನ ಪ್ರಿನ್ಸಿಪಾಲ್ ಚಂದ್ರಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಸಾಗುವಳಿ ಸಮಿತಿಗೆ ನೇಮಕ
ಶಿಡ್ಲಘಟ್ಟ: ಶಿಡ್ಲಘಟ್ಟ ವಿದಾನಸಭಾ ಕ್ಷೇತ್ರದ ಬಗರ್ಹುಕುಂ ಸಾಗುವಳಿ ಸಕ್ರಮ ಸಮಿತಿ ಸದಸ್ಯರನ್ನಾಗಿ ನಿವೃತ್ತ ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿ ಕೃಷ್ಣಪ್ಪ ಅವರನ್ನು ನೇಮಿಸಲಾಗಿದೆ ಎಂದು ಕರ್ನಾಟಕ ರಾಜ್ಯಪಾಲರ ಹೆಸರಿನಲ್ಲಿ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ ಉಮಾದೇವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.