ಬಸ್ಗೆ ಬೆಂಕಿ: ಪ್ರಯಾಣಿಕರು ಪಾರು
ಚಿಂತಾಮಣಿ: ಸಾರಿಗೆ ಬಸ್ ಎಂಜಿನ್ನಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದ ಘಟನೆ ಭಾನುವಾರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಬಾಗೇಪಲ್ಲಿ ರಸ್ತೆ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ.
ಬಾಗೇಪಲ್ಲಿ ಸಾರಿಗೆ ಘಟಕಕ್ಕೆ ಸೇರಿದ ಬಸ್ ಚಿಂತಾಮಣಿಗೆ ಬರುತ್ತಿರುವಾಗ ರೈಲ್ವೆ ಅಂಡರ್ ಪಾಸ್ ಬಳಿ ಎಂಜಿನ್ನಲ್ಲಿ ಹೊಗೆ ಬರುತ್ತಿರುವುದನ್ನು ಕಂಡ ಚಾಲಕ ಪ್ರಯಾಣಿಕರಿಗೆ ಅರಿವು ಮೂಡಿಸಿದರು. ನಾಗರಿಕರ ಸಹಾಯದಿಂದ ಪ್ರಯಾಣಿಕರು ತಮ್ಮ ವಸ್ತುಗಳನ್ನು ಅಲ್ಲೆ ಬಿಟ್ಟು ಕಿಟಕಿಗಳ ಮೂಲಕ ದುಮುಕಿ ಹೊರ ಬರುವ ವೇಳೆಗೆ ಬಸ್ಸು ಸಂಪೂರ್ಣ ಬೆಂಕಿಗೆ ಆಹುತಾಯಿತೆಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದರು. ಬಸ್ನಲ್ಲಿ ಆಕಸ್ಮಿಕ ಬೆಂಕಿ ತಗಲಿರುವ ಬಗ್ಗೆ ನಾಗರಿಕರು ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದರೂ ತಡವಾಗಿ ಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಯಿತು. ನಂತರ ಅಗ್ನಿಶಾಮಕ ಸಿಬ್ಬಂದಿ ಸುಮಾರು 1 ತಾಸಿನ ಕ್ಕೂ ಹೆಚ್ಚು ಸಮಯದಲ್ಲಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಘಟಕದ ವ್ಯವಸ್ಥಾಪಕರ ವಿರುದ್ಧ ದೂರು: ಬಾಗೇಪಲ್ಲಿ ಘಟಕಕ್ಕೆ ಸೇರಿದ ಸಾರಿಗೆ ಬಸ್ನಲ್ಲಿ ಹಲವಾರು ದೋಷಗಳು ಕಂಡು ಬಂದರೂ ಘಟಕದ ವ್ಯವಸ್ಥಾಪಕರು ತಲೆ ಕಡೆಸಿಕೊಳ್ಳದಿರುವ ಬಗ್ಗೆ ತೀವ್ರ ಅಸಮಾಧಾನಗೊಂಡ ಪ್ರಯಾಣಿಕರು ಬೆಂಕಿ ಅನಾಹುತಕ್ಕೆ ಸಂಬಂಧಿಸಿ ಘಟಕದ ವ್ಯವಸ್ಥಾಪಕರ ವಿರುದ್ಧ ಕಿರಿಕಾರಿದರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಣ್ಣ ತಿಮ್ಮಪ್ಪ ಹಾಗೂ ಪೊಲೀಸ್ ಸಿಬ್ಬಂದಿ ಆಗಮಿಸಿ ಪ್ರಯಾಣಿಕರನ್ನು ಸ್ವಗ್ರಾಮಗಳಿಗೆ ಕಳುಹಿಸಲು ಮುಂದಾದರು. ಬೆಂಕಿ ಅನಾಹುತಕ್ಕೆ ಬಾಗೇಪಲ್ಲಿ ಘಟಕದ ವ್ಯವಸ್ಥಾಪಕರ ಬೇಜವಾಬ್ದಾರಿತನವೇ ಕಾರಣವೆಂದು ಪ್ರಯಾಣಿಕರು ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದರು.