ಶುಲ್ಕ ಫಲಕ ಅಗತ್ಯವಿಲ್ಲ: ಕುಸ್ಮಾ
ಬಂಗಾರಪೇಟೆ: ದಾಖಲಾತಿ ಸಮಯ ಮುಗಿದು ಎಲ್ಲಾ ಪ್ರಕ್ರಿಯೆಗಳು ಮುಗಿಯುವ ವೇಳೆ ಖಾಸಗಿ ಶಾಲೆಗಳ ಗೋಡೆಗಳ ಮೇಲೆ ಶುಲ್ಕದ ಫಲಕವನ್ನು ಬಣ್ಣದಲ್ಲಿ ಬರೆಸಬೇಕು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿರುವ ಸೂಚನೆ ಕಾನೂನು ಬಾಹಿರ ಎಂದು ಕುಸ್ಮಾ(ಕರ್ನಾಟಕ ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆ) ವಕೀಲ ಕೆ.ವಿ.ಧನಂಜಯ ಹೇಳಿದ್ದಾರೆ.
ಪಟ್ಟಣದ ಖಾಸಗಿ ಶಿಕ್ಷಣ ಸಂಸ್ಥೆಗಳು ಸಂತೋಷ್ ಶಾಲೆಯಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಮಾತನಾಡಿ, ಪ್ರತಿ ಖಾಸಗಿ ಶಾಲೆಯಲ್ಲಿ ತಾವು ನಿಗದಿ ಮಾಡಿರುವ ಶುಲ್ಕವನ್ನು ಪೋಷಕರ ಮಾಹಿತಿಗಾಗಿ ಫಲಕದಲ್ಲಿ ಪ್ರಕಟಿಸಬೇಕು. ಸದರಿ ಫಲಕವನ್ನು ದಾಖಲಾತಿ ಸಮಯ ಮುಗಿದ ನಂತರ ತೆಗೆದು ಹಾಕಬಹುದು. ಆದರೆ ಜುಲೈ ತಿಂಗಳಿನಲ್ಲಿ ಯಾವುದೋ ಒತ್ತಡಕ್ಕೆ ಮಣಿದು ಶಿಕ್ಷಣ ಇಲಾಖೆ ಅಧಿಕಾರಿಗಳು ಈ ರೀತಿಯ ಸೂಚನೆ ನೀಡಿರುವುದು ಕಾನೂನು ಬಾಹಿರ. ಇಂಥ ಕ್ರಮವನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ವಿರೋಧಿಸಬೇಕು ಎಂದರು.
ಖಾಸಗಿ ಶಾಲೆಗಳು ಸಹ ತಾವು ವಿಧಿಸುವ ಶುಲ್ಕವನ್ನು ಪ್ರಾಮಾಣಿಕವಾಗಿ ಪ್ರದರ್ಶಿಸಬೇಕು. ತಾವು ಪಡೆದುಕೊಂಡ ಹಣಕ್ಕೆ ಸೂಕ್ತ ರಸೀದಿ ನೀಡಬೇಕು. ಸರ್ಕಾರದ ಮುಂದೆ ಶಾಲೆಗಳು ಪ್ರಾಮಾಣಿಕವಾಗಿ ನಡೆದುಕೊಂಡರೆ, ಮತ್ತಷ್ಟು ನ್ಯಾಯವನ್ನು ನಾವು ಪಡೆಯಬಹುದು ಎಂದರು. ಕುಸ್ಮ ರಾಜ್ಯಾಧ್ಯಕ್ಷ ವಿ.ಆರ್.ಎನ್.ರೆಡ್ಡಿ ಮಾತನಾಡಿ, ಭಾಷಾ ನೀತಿಯನ್ನು ಐವರು ಸದಸ್ಯರಿದ್ದ ಸುಪ್ರಿಂ ಕೋರ್ಟ್ನ ಸಂವಿಧಾನ ಪೀಠ ತಿರಸ್ಕರಿಸಿದೆ. ಇನ್ನು ಮುಂದೆ ಎಲ್ಲಾ ಶಾಲೆಗಳು ಇಂಗ್ಲೀಷ್ ಮಾಧ್ಯಮದಲ್ಲಿ ಪಾಠಗಳನ್ನು ಮಾಡಬಹುದು. ಈ ನಿಟ್ಟಿನಲ್ಲಿ ಕುಸ್ಮದ ಸದಸ್ಯ ಶಾಲೆಗಳಿಗೆ ಸಂಘದ ವತಿಯಿಂದ ಕನ್ನಡದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿಕೊಡಲಾಗುವುದು ಎಂದರು.
ಕುಸ್ಮ ಉಪಾಧ್ಯಕ್ಷ ಸತ್ಯಮೂರ್ತಿ ಮತ್ತು ಜಿಲ್ಲಾಧ್ಯಕ್ಷ ಮುನಿಯಪ್ಪ ಮಾತನಾಡಿದರು. ಕೃಷ್ಣಮೂರ್ತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಸ್ಮ ಜಂಟಿ ಕಾರ್ಯದರ್ಶಿ ವಿಜಯ ಶೆಟ್ಟಿ, ಜಿಪಂ ಸದಸ್ಯರುಗಳಾದ ಅ.ಮು.ಲಕ್ಷ್ಮೀನಾರಾಯಣ, ಕೃಷ್ಣ, ತಾಲೂಕಾಧ್ಯಕ್ಷ ಅಬ್ದುಲ್ ಸತ್ತಾರ್ ಸ್ವಾಗತಿಸಿದರು. ಆದಿಲ್ ವಂದಿಸಿದರು. ರಾಮಕೃಷ್ಣಪ್ಪ ನಿರೂಪಿಸಿದರು.