ಆಹಾರ ಅದಾಲತ್
ಗುಡಿಬಂಡೆ: ಪಟ್ಟಣದ ಟಿಎಪಿಸಿಎಂಎಸ್ ನ್ಯಾಯಬೆಲೆ ಅಂಗಡಿಯಲ್ಲಿ ಸೋಮವಾರ ಪಡಿತರ ಚೀಟಿದಾರರಿಗೆ ಆಹಾರ ಅದಾಲತ್ ಏರ್ಪಡಿಸಲಾಗಿತ್ತು. ನೋಡಲ್ ಅಧಿಕಾರಿಯಾಗಿ ಭಾಗವಹಿಸಿದ್ದ ಪಪಂ ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ ಕಾರ್ಡ್ದಾರರಿಗೆ ಸಮರ್ಪಕವಾಗಿ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಪಡಿತರದಾರರ ಕುಂದು ಕೊರತೆಗಳನ್ನು ವಿಚಾರಿಸಿದರು. ಈ ಸಂದರ್ಭದಲ್ಲಿ ಹಲವು ಪಡಿತರದಾರರು, ಪ್ರಸ್ತುತ ರೇಷನ್ ಪಡೆಯಲು ಇಲ್ಲಿ ಪುರುಷ ಮತ್ತು ಮಹಿಳೆಯರಿಗೆ ಒಂದೇ ಕೌಂಟರ್ ಇದೆ. ಹೀಗಾಗಿ ಮಹಿಳೆಯರಿಗೆ ಪಡಿತರ ಪಡೆಯಲು ಕಷ್ಟವಾಗಿದ್ದು ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಬೇಕು, ಪಡಿತರ ಚೀಟಿಗಳ ಪರಿಶೀಲನೆಯಲ್ಲಿ ವಿಳಂಬವಾಗುತ್ತಿದ್ದು ಸಂಬಂಧಪಟ್ಟವರು ಶೀಘ್ರ ಸಮಸ್ಯೆ ನಿವಾರಿಸಬೇಕು ಎಂದು ತಿಳಿಸಿದರು. ಈ ವೇಳೆ ಮಾತನಾಡಿದ ಆಹಾರ ನಿರೀಕ್ಷಕ ವೆಂಕಟನಾರಾಯಣಪ್ಪ, ಪಡಿತರ ಚೀಟಿದಾರರ ಸಮಸ್ಯೆ ನಿವಾರಣೆ ಮತ್ತು ವಿತರಣೆಯಲ್ಲಿ ಸುಧಾರಣೆ ತರುವ ದೃಷ್ಟಿಯಿಂದ ಪ್ರತಿ ತಿಂಗಳು ಆಹಾರ ಅದಾಲತ್ ನಡೆಸಲಾಗುತ್ತಿದೆ. ಜನತೆ ಪಡಿತರ ವಿತರಣೆ ವಿಚಾರದಲ್ಲಿ ನ್ಯೂನತೆ ಕಂಡುಬಂದರೆ ಇಲಾಖೆ ಗಮನಕ್ಕೆ ತಂದು ಪರಿಹರಿಸಿಕೊಳ್ಳಬಹುದು ಎಂದರು. ಈ ವೇಳೆ ಶ್ರೀ ರಾಮರೆಡ್ಡಿ, ಮೂರ್ತಿ, ಅಶ್ವಥ್ ಇದ್ದರು.
ಶಾಸಕರ ಮೌನಕ್ಕೆ ಖಂಡನೆ
ಕೋಲಾರ: ಜಿಲ್ಲೆಯ ಶಾಸಕರು ಸದನದಲ್ಲಿ ಜಿಲ್ಲೆಯ ನೀರಾವರಿ ಯೋಜನೆ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸದೆ ಜನತೆಯನ್ನು ವಂಚಿಸುತ್ತಿದ್ದಾರೆಂದು ರೈತ ಸಂಘದ ಜಿಲ್ಲಾ ಸಮಿತಿ ಆರೋಪಿಸಿದೆ. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ರೈತ ಸಂಘದ ಜಿಲ್ಲಾ ಸಮಿತಿಯ ಸಭೆಯಲ್ಲಿ, ಚುನಾವಣೆ ಸಮಯದಲ್ಲಿ ಓಟಿಗೋಸ್ಕರ ಶಾಶ್ವತ ನೀರಾವರಿ ಮತ್ತು ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಬಗ್ಗೆ ಉತ್ತರನ ಪೌರುಷದ ರೀತಿಯಲ್ಲಿ ಮಾತನಾಡಿದ್ದ ರಾಜಕೀಯ ಮುಖಂಡರು ಗೆದ್ದ ನಂತರ ಕೊಟ್ಟ ಮಾತು ತಪ್ಪಿದ್ದಾರೆಂದು ಟೀಕಿಸಿದರು. ಜಿಲ್ಲೆಯಲ್ಲಿ ಮರಳು, ಗ್ರಾನೈಟ್ ದಂಧೆ, ಕಚೇರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಸರ್ಕಾರದಿಂದ ಬರುವ ಅನುದಾನ ಕಳಪೆ ಕಾಮಗಾರಿಗಳಿಂದ ಕೂಡಿದ್ದು ಅಧಿಕಾರಿಗಳು ಮತ್ತು ಗುತ್ತಿಗೆದಾರರ ಹಣ ಮಾಡುವ ದಂಧೆಯಾಗಿದೆ. ಮಳೆಯಿಲ್ಲದೆ ಸೊರಗುತ್ತಿರುವ ರೈತನಿಗೆ ನಕಲಿ ಬಿತ್ತನೆ ಬೀಜ, ನಕಲಿ ಔಷಧಗಳು ರೈತರ ಜೀವ ಹಿಂಡುತ್ತಿದೆ ಎಂದು ದೂರಿದರು. ಅಧ್ಯಕ್ಷತೆಯನ್ನು ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ ವಹಿಸಿದ್ದರು, ಹಸಿರು ಸೇನೆಯ ಜಿಲ್ಲಾಧ್ಯಕ್ಷ ಹುಲ್ಕೂರು ಹರಿಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕ ಕೆ. ಶ್ರೀನಿವಾಸಗೌಡ, ಬಂಗವಾದಿ ನಾಗರಾಜ ಗೌಡ, ಹೆಬ್ಬಣಿ ಆನಂದರೆಡ್ಡಿ, ರಂಜಿತ್ ಕುಮಾರ್ ಇದ್ದರು.
ರೈತರಿಗೆ ಬೀಜ ವಿತರಣೆ
ಕೆಜಿಎಫ್: ಕೃಷಿ ಇಲಾಖೆ ವತಿಯಿಂದ ರಾಗಿ ಪ್ರೋತ್ಸಾಹ ಯೋಜನೆಯಡಿ ಬಿತ್ತನೆ ಬೀಜಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಕೃಷಿಕರು ಇದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದು ಶಾಸಕಿ ವೈ. ರಾಮಕ್ಕ ಹೇಳಿದರು. ಬೇತಮಂಗಲ ಹೋಬಳಿಯ ನಾಗಶೆಟ್ಟಿಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ 2014-15ನೇ ಸಾಲಿನ ಹೋಬಳಿ ಮಟ್ಟದ ಭೂಚೇತನ ತರಬೇತಿ ಮತ್ತು ರಾಗಿ ಪ್ರೋತ್ಸಾಹ ಯೋಜನೆಯಡಿ 140 ರೈತರಿಗೆ ಪರಿಕರಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಸಗೊಬ್ಬರ: ಸರ್ಕಾರ ನೀಡುತ್ತಿರುವ ಔಷಧಗಳ ಬೋರಾನ್, ಜಿಪ್ಸಮ್, ಏರ್ನಿಕೋಪೋಸ್ಟ್ ಹೆಸರಿನ ಔಷಧಿಗಳು ಮತ್ತು ಗೊಬ್ಬರಗಳು ರೈತ ಸಂಪರ್ಕ ಕೇಂದ್ರಗಳ ಮೂಲಕ ರೈತರಿಗೆ ವಿತರಿಸಲಾಗುತ್ತಿದೆ. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ದೊರೆಯುತ್ತಿದ್ದು, ರೈತರು ಉತ್ತಮ ಬೆಳೆಗಳನ್ನು ಬೆಳೆಯಬಹುದಾಗಿದೆ. ವಿತರಣೆಯಲ್ಲಿ ಯಾವುದೇ ರೀತಿ ಅವ್ಯವಹಾರ ಕಂಡುಬಂದಲ್ಲಿ ಅಧಿಕಾರಿಗಳಿಗೆ ತಿಳಿಸಿ ಎಂದರು.