ಕಾರ್ಮಿಕರಿಗೆ ಬಲ ತುಂಬಿ
ಬಾಗೇಪಲ್ಲಿ: ಅಸಂಘಟಿತ ಕಾರ್ಮಿಕರಿಂದ ಪಟ್ಟಣದಲ್ಲಿ ಕಾರ್ಮಿಕರ ಹಕ್ಕುಗಳ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ಕೋಲಾರದಿಂದ ಆಗಮಿಸಿದ ಜಾಥಾವನ್ನು ಸಿಐಟಿಯು ತಾಲೂಕಾಧ್ಯಕ್ಷ ಆಂಜನೇಯರೆಡ್ಡಿ ಪಟ್ಟಣದ ಡಾ.ಎಚ್. ಎನ್ ವೃತ್ತದಲ್ಲಿ ಸ್ವಾಗತಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ಧಗಂಗಪ್ಪ ಮಾತನಾಡಿ, ಅಸಂಘಟಿತ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮೀನಾಮೇಷ ಎಣಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮ ಬೇಡಿಕೆಗಳನ್ನು ಈಡೇರಿಸಲು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿಜಯಭಾರತಿ, ಮಂಜುನಾಥ್, ವೆಂಕಟರಾಮ, ಗೋವಿಂದಮ್ಮ, ರಾಧಮ್ಮ ಇದ್ದರು.
ಮಾಸ್ತಿಯಲ್ಲಿ ಹೋಬಳಿ ಮಟ್ಟದ ಪೋಡಿ ಅದಾಲತ್ 21ರಂದು
ಮಾಲೂರು: ಮಾಸ್ತಿಯಲ್ಲಿ ಜು.21ರಂದು ಹೋಬಳಿ ಮಟ್ಟದ ಪೋಡಿ ಅದಾಲತ್ ಆಂದೋಲನಾ ಹಮ್ಮಿಕೊಂಡಿದ್ದು, ಅದಕ್ಕಾಗಿ ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ರವಿ ಹೇಳಿದರು. ಸೋಮವಾರ ಇಲ್ಲಿನ ಕಚೇರಿಯಲ್ಲಿ ಪತ್ರಕರ್ತರೊಡನೆ ಮಾತನಾಡುತ್ತ ಜುಲೈ 21 ರಂದು ನಡೆಯಲಿರುವ ಪೋಡಿ ಅದಾಲತ್ ಗಾಗಿ ಬೇಕಾಗಿರುವ ದಾಖಲೆಗಳನ್ನು ಸಿದ್ಧಪಡಿಸುವ ಕಾರ್ಯ ಇಂದು ನಡೆದಿದ್ದು, ಪಂಚಾಯ್ತಿ ಕಾರ್ಯದರ್ಶಿಗಳು, ಕಂದಾಯ ಅಧಿಕಾರಿಗಳ ಸಹಕಾರದಲ್ಲಿ ದಾಖಲೆ ತಯಾರು ಮಾಡಲಾಗಿದೆ ಎಂದರು. ಮಾಸ್ತಿಯಲ್ಲಿ ನಡೆಯಲಿರುವ ಹೋಬಳಿ ಮಟ್ಟದ ಪೋಡಿ ಅದಾಲತ್ಗಾಗಿ 87 ಹದ್ದುಬಸ್ತು, 28 ಭೂ ಪರಿವರ್ತನಾ, ಸಾವಿರಕ್ಕೂ ಹೆಚ್ಚು ಭೂಮಂಜೂರಾತಿಗಳ ಅರ್ಜಿಗಳು ಬಂದಿದ್ದು, ಕೆಲವು ಪ್ರಕರಣಗಳ ದಾಖಲೆಗಳು ಸರ್ಕಾರಿ ಕಚೇರಿಯಲ್ಲಿ ಕಂಡು ಬಂದಿಲ್ಲ. ಇಂತಹ ಅಸ್ತಿಗಳ ಬಗ್ಗೆ ತಮ್ಮಲ್ಲಿರುವ ದಾಖಲೆ ನೀಡುವಂತೆ ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಲಿದ್ದು, ಅವರು ನೀಡುವ ದಾಖಲೆಗಳನ್ನು ಪರಿಶೀಲಿಸಿ ನಂತರ ಗಣನೆಗೆ ತೆಗೆದುಕೊಳ್ಳಲಾಗುವುದು. ಅವರಲ್ಲೂ ದಾಖಲೆಗಳು ಇಲ್ಲದಿದ್ದರೆ ಅಂತಹವುಗಳನ್ನು ರದ್ದು ಪಡಿಸಲಾಗುವುದು ಎಂದರು. ಅರ್ಹ ಮಂಜೂರಾತಿದಾರರಿಗೆ ಅನ್ಯಾಯವಾಗಬಾರದೆಂಬ ದೃಷ್ಟಿಯಿಂದ ಪೋಡಿ ಅದಾಲತ್ ಹಮ್ಮಿಕೊಳ್ಳುತ್ತಿದ್ದು, ಈ ಅಂದೋಲನಾ ಮೂಲಕ ಸರ್ಕಾರಿ ಜಮೀನುಗಳನ್ನು ಬಂದೂಬಸ್ತು ಮಾಡಲಾಗುವುದು ಎಂದರು.ಈಗಾಗಲೇ ಪೋಡಿ ಅದಾಲತ್ ಯಶಸ್ವಿಗೊಳಿಸಬೇಕೆಂಬ ಉದ್ದೇಶದಿಂದ 37 ಸರ್ವೆ ಅಧಿಕಾರಿಗಳು ಮಾಸ್ತಿ ಹೋಬಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಜುಲೈ 21 ರಂದು ಜಿಲ್ಲಾ ಆಡಳಿತ ಪೋಡಿ ಅದಾಲತ್ ನಡೆಸಲು ಎಲ್ಲ ರೀತಿಯಲ್ಲಿ ಸಿದ್ಧವಿರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.