ವಿಜ್ಞಾನ ಕೇಂದ್ರ ಸ್ಥಾಪನೆಗೆ 1 ಕೋಟಿ ಮಂಜೂರು
ಗೌರಿಬಿದನೂರು: ಡಾ.ಎಚ್.ಎನ್ ರವರ ಕನಸು ನನಸಿಗಾಗಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲು ಸರ್ಕಾರ ಒಂದು ಕೋಟಿ ರು.ಗಳನ್ನು ಮಂಜೂರು ಮಾಡಿದೆ ಎಂದು ವಿಧಾನ ಸಭೆ ಉಪಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ನುಡಿದರು.
ಹೊಸೂರಿನ ಡಾ.ಎಚ್.ಎನ್. ನ್ಯಾಷನಲ್ಹೈಸ್ಕೂಲಿನ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ, ವಿಜ್ಞಾನ ಕೇಂದ್ರ ಸ್ಥಾಪನೆಗೆ ಎಚ್ಎನ್ ರವರ ಸಮಾಧಿಯಾದ ಪುಣ್ಯ ಧಾಮವನ್ನು ಅಭಿವೃದ್ಧಿ ಪಡಿಸಲು ಸರ್ಕಾರ ಬದ್ಧವಾಗಿದೆ ಎಂದರು.
ಈ ವಿಜ್ಞಾನ ಕೇಂದ್ರದಲ್ಲಿ ಯುವ ವಿಜ್ಞಾನಿಗಳು ಸಂಶೋಧನೆ ಮಾಡಲು ಅನುವು ಮಾಡಿಕೊಡಲಾಗುವುದು. ಇಲ್ಲಿನ ಹಳೆಯ ವಿದ್ಯಾರ್ಥಿ, ಡಾ. ವಿಜಯ ಮಲ್ಯ ರವರ ಕಂಪೆನಿಯಲ್ಲಿ ವ್ಯವಸ್ಥಾಪಕರಾದ ಆರ್. ರಂಗನಾಥ್ ಶಾಲೆಯ ಬಗ್ಗೆ ಕಾಳಜಿವಹಿಸಿ ರಾಜ್ಯ ಸಭಾಸದಸ್ಯ ಡಾ.ವಿಜಯ ಮಲ್ಯ ರವರ ಪ್ರಾದೇಶಿಕ ಅಭಿವೃದ್ಧಿನಿಧಿಯಿಂದ ರು. 26 ಲಕ್ಷ ಮಂಜೂರು ಮಾಡಿಸಿದ್ದಾರೆ ಎಂದರು.
ಜಿಲ್ಲಾಧಿಕಾರಿ ಡಾ. ವಿಶಾಲ್ ಮಾತನಾಡಿ, ಹೊಸೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಲಾಗುವುದು ಎಂದರು. ತಾಲೂಕು ದಂಡಾಧಿಕಾರಿ ಡಾ.ಎನ್. ಭಾಸ್ಕರ್, ತಾಪಂ ಇಒ ರೆಡ್ಡೆಪ್ಪ, ನ್ಯಾಷನಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಎ.ಎಚ್. ರಾಮಾರಾವ್, ತಾಂತ್ರಕ ವಿಜ್ಞಾನ ಇಲಾಖೆಯ ವಿಶೇಷ ನಿರ್ದೇಶಕ ಡ.ಹೊನ್ನೇಗೌಡ, ಕನ್ನಡ ಸಂಸ್ಕೃತಿ ಇಲಾಖೆಯ ವೆಂಕಟಾಚಲಪತಿ ಇದ್ದರು. ಶಾಲಾ ಮಕ್ಕಳಿಗೆ ಜಿಲ್ಲಾಧಿಕಾರಿ ಉಚಿತ ಪುಸ್ತಕ, ಸಮವಸ್ತ್ರ ವಿತರಿಸಿದರು. ಶಾಲಾ ಆಡಳಿತ ಮಂಡಲಿಯವರಿಂದ ಗಣ್ಯರಿಗೆ ಸನ್ಮಾನ ಮಾಡಲಾಯಿತು.