ವಿಮಾ ಪಾಲಸಿ ವಿತರಣೆ
ಚಿಕ್ಕಬಳ್ಳಾಪುರ: ಬುದ್ಧಿಮಾಂಧ್ಯ ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಜಾರಿಗೆ ತಂದಿರುವ ವಿಮಾ ಯೋಜನೆಯ ಗುರುತಿನ ಚೀಟಿ ಮತ್ತು ವಿಮಾ ಪಾಲಿಸಿಗಳನ್ನು ಜಿಲ್ಲಾಧಿಕಾರಿ ಡಾ. ವಿಶಾಲ್ ಫಲಾನುಭವಿಗಳಿಗೆ ವಿತರಿಸಿದರು. ನಗರದ ಸರ್ಕಾರಿ ಜ್ಯೂನಿಯರ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳು ವಿಮಾ ಪಾಲಸಿಗಳನ್ನು ಪಡೆದರು. ಬಿಪಿಎಲ್ ಕಾರ್ಡ್ಗಳನ್ನು ಹೊಂದಿರುವವರಿಗೆ ವಾರ್ಷಿಕ 250 ಹಾಗೂ ಎಪಿಎಲ್ ಕಾರ್ಡ್ ದಾರರು ವಾರ್ಷಿಕ 500 ನ್ಯಾಷನಲ್ ಟ್ರಸ್ಟ್ ನಿರಾಮಾಯಾ ಹೆಸರಿನಲ್ಲಿ ಎಸ್ಬಿಐ ಬ್ಯಾಂಕ್ ಖಾತೆ ಸಂಖ್ಯೆ 30396764585 ಕ್ಕೆ ಜಮಾ ಮಾಡಬೇಕು. ನಿರಾಮಾಯ ಗುರುತಿನ ಚೀಟಿ ದೊರಕಿದ ಒಂದು ತಿಂಗಳ ಒಳಗೆ ಶಸ್ತ್ರ ಚಿಕಿತ್ಸೆಯು ಸೇರಿದಂತೆ ಯಾವುದೇ ರೀತಿಯ ವೈದ್ಯಕೀಯ ಚಿಕಿತ್ಸೆಗೆ ಒಳಗಾಗಿದ್ದಲ್ಲಿ ಆ ಚಿಕಿತ್ಸೆಯ ವೆಚ್ಚವನ್ನು ಸಾರಿಗೆ ವೆಚ್ಚದ ಸಹಿತ ಮರು ಪಾವತಿ ಪಡೆಯಬಹುದಾಗಿದೆ.ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಟೋಲಲ್ಫ್ರೀ ಸಂಖ್ಯೆ 18002098888 ಅಥವಾ 18002334505 ಅನ್ನು ಸಂಪರ್ಕಿಸಬಹುದು ಎಂದು ಲೋಕಲ್ ಲೆವಲ್ ಕಮಿಟಿ ಸದಸ್ಯ ವಿ.ಎಂ.ನಾಗರಾಜಯ್ಯ ತಿಳಿಸಿದರು. ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕಿ ಮಂಜುಳಾ, ಮಾನಸಿಕ ಆರೋಗ್ಯ ತಜ್ಞ ಡಾ.ಕಿಶೋರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಸುರೇಖಾ ವಿಜಯಪ್ರಕಾಶ್, ಎಲ್.ಎಲ್.ಸಿ. ಸಮಿತಿ ಸದಸ್ಯ ಲೇಪಾಕ್ಷಿ ಸಂತೋಷ್ ರಾವ್ ಮುಂತಾದವರು ಉಪಸ್ಥಿತರಿದ್ದರು.
ಗಮಕ, ವಚನ, ಕೀರ್ತನ ಶಿಬಿರ
ಚಿಕ್ಕಬಳ್ಳಾಪುರ: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಹರಿಹರದ ಶ್ರೀ ರಾಘವೇಂದ್ರಸ್ವಾಮಿ ವೃಂದಾವನ ಟ್ರಸ್ಟ್ ಸಹಯೋಗದೊಂದಿಗೆ ಆ.4 ಮತ್ತು 5 ರಂದು ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಕನ್ನಡ ಶಿಕ್ಷಕ ಶಿಕ್ಷಕಿಯರಿಗೆ ಗಮಕ, ವಚನ ಹಾಗೂ ಹರಿದಾಸ ಕೀರ್ತನ ಶಿಬಿರವನ್ನು ಹಮ್ಮಿಕೊಂಡಿದೆ. ಉಚಿತ ಈ ಶಿಬಿರದಲ್ಲಿ ಪ್ರಾಥಮಿಕ ಸಂಗೀತ ಜ್ಞಾನವುಳ್ಳ ಪ್ರೌಢಶಾಲೆಗಳ ಕನ್ನಡ ಶಿಕ್ಷಕ ಶಿಕ್ಷಕಿಯರು ಭಾಗವಹಿಸಬಹುದು. ಒಟ್ಟು 60 ಮಂದಿ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರಾರ್ಥಿಗಳು ತಮ್ಮ ಸ್ವವಿವರ (ಹೆಸರು, ಶಾಲಾ ವಿಳಾಸ, ದೂರವಾಣಿ, ಮೊಬೈಲ್ ಸಂಖ್ಯೆ)ವನ್ನು ಜು.21 ರೊಳಗಾಗಿ ರಿಜಿಸ್ಟಾರ್, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ, ಕನ್ನಡ ಭವನ, 2ನೇ ಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-2 ಇಲ್ಲಿಗೆ ಕಳುಹಿಸಿಕೊಡಬೇಕು.
ವಿದ್ಯುತ್ ವ್ಯತ್ಯಯ
ಚಿಕ್ಕಬಳ್ಳಾಪುರ: ಕವಿಪ್ರನಿನಿವತಿಯಿಂದ ಗೌರಿಬಿದನೂರು 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ. ಹಾಗಾಗಿ ಗೌರಿಬಿದನೂರು, ರಮಾಪುರ, ತೊಂಡೆಬಾವಿ, ಎಸಿಸಿ, ವಿದುರಾಶ್ವಥ್ಥ, ಮಂಚೇನಹಳ್ಳಿ, ವಾಟದಹೊಸಹಳ್ಳಿ, ಡಿ.ಪಾಳ್ಯ, ಜಿ.ಕೊತ್ತೂರು, ಗುಡಿಬಂಡೆ, ಪೆರೇಸಂದ್ರ, ಬಾಗೇಪಲ್ಲಿ, ಸೋಮನಾಥಪುರ, ತಿಮ್ಮಂಪಲ್ಲಿ, ಪಾತಪಾಳ್ಯ 66್ಗ11 ಕೆ.ವಿ ಉಪ ವಿದ್ಯುತ್ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಗೆ ಜು.8 ರಂದು ಬೆಳಗ್ಗೆ 9 ರಿಂದ ಸಾಯಂಕಾಲ 4 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಸಾರ್ವಜನಿಕರು ಸಹಕರಿಸಬೇಕೆಂದು ಬೆ.ವಿ.ಕಂ.ನ ಕಾರ್ಯ ನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.