ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಇಲ್ಲದಿದ್ರೆ ನಿಮ್ಮ ಪತ್ನಿ ಮೇಲೆ ಅತ್ಯಾಚಾರವೆಸಗುತ್ತೇನೆ!

Rashmi Kasaragodu
Updated On : 8 Jul 2014, 2:14 am

ಕೋಲಾರ: ಮುಳಬಾಗಿಲು ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಕರ್ನಾಟಕ ದಲಿತ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ನಾರಾಯಣಸ್ವಾಮಿ ಎಂಬವರು ಜೀವ ಬೆದರಿಕೆ ಜೊತೆಗೆ ಆಶ್ಲೀಲ ಪದಗಳನ್ನು ಬಳಸಿ ಪತ್ರ ಬರೆದಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ಸೋಮವಾರ ನಾರಾಯಣಸ್ವಾಮಿ ಅವರನ್ನು ಎಸ್ಪಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಶಾಸಕರಿಗೆ ಕರ್ನಾಟಕ ದಲಿತ ರಕ್ಷಣಾ ಸಮಿತಿ ಲೆಟರ್ ಹೆಡ್ ಬಳಕೆ ಮಾಡಿ ಬರೆದಿರುವ ಜೀವ ಬೆದರಿಕೆ ಪತ್ರವನ್ನು ಜು.3ರಂದು ಫೋಸ್ಟ್ ಮೂಲಕ ಬೆಂಗಳೂರಿನ ಶಾಸಕರ ಭವನದಲ್ಲಿರುವ ಶಾಸಕರ ಕೊಠಡಿಗೆ ಮತ್ತು ಮುಳಬಾಗಿಲು ಪಟ್ಟಣದಲ್ಲಿರುವ ಕಚೇರಿಗೆ ಬಂದಿದ್ದ ಹಿನ್ನೆಲೆಯಲ್ಲಿ ಶಾಸಕರು ಸೋಮವಾರ ತಮಗೆ ಬಂದಿರುವ ಪತ್ರವನ್ನು ವಿಧಾನಸಭೆಯಲ್ಲಿ ಸ್ವೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ನೀಡಿ ರಕ್ಷಣೆ ಕೋರಿದ್ದರು.
ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ತಕ್ಷಣ ಮುಳಬಾಗಿಲು ಸೇರಿದಂತೆ ಜಿಲ್ಲೆಯೆಲ್ಲೆಡೆ ಸಂಚಲನ ಉಂಟಾಗಿತ್ತು. ಟಿವಿಗಳಲ್ಲಿ ಪ್ರಕಟಗೊಂಡ ಸುದ್ದಿಯನ್ನು ಆಧರಿಸಿ ಜಿಲ್ಲಾ ಎಸ್ಪಿ ಅವರು ಪತ್ರ ವಿವಾದಕ್ಕೆ ಸಿಲುಕಿರುವ ಎಂ.ಎಸ್.ನಾರಾಯಣಸ್ವಾಮಿ ಅವರನ್ನು ಕರೆಸಿಕೊಂಡು ವಿಚಾರಿಸಿದಾಗ ಕರ್ನಾಟಕ ದಲಿತ ರಕ್ಷಣಾ ಸಮಿತಿಯ ಅಸಲಿ ಲೆಟರ್ ಹೆಡ್ ಹಾಗೂ ಶಾಸಕರಿಗೆ ಬರೆದಿರುವ ಪತ್ರಕ್ಕೆ ಬಳಸಿರುವ ಲೆಟರ್ ಹೆಡ್ಗೂ ವ್ಯತ್ಯಾಸ ಇರುವುದನ್ನು ಹಾಗೂ ತನ್ನ ಸಹಿಯನ್ನು ಯಾರೋ ಫೋರ್ಜರಿ ಮಾಡಿದ್ದಾರೆಂದು ತಿಳಿಸಿದ ಮೇಲೆ ಎಸ್ಪಿಯವರು ನಾರಾಯಣಸ್ವಾಮಿಯವರನ್ನು ವಾಪಸ್ ಕಳುಹಿಸಿ ಕೊಟ್ಟಿದ್ದಾರೆ.
ಪತ್ರದ ರಾದ್ಧಾಂತ: ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ಜು.3ರಂದು ಎಂ.ಎಸ್.ನಾರಾಯಣಸ್ವಾಮಿ ಹೆಸರಿನಲ್ಲಿ ಬರೆದಿರುವ ಪತ್ರದಲ್ಲಿ ಕೂಡಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಬೇಕು, ಒಂದು ವೇಳೆ ರಾಜಿನಾಮೆ ನೀಡದಿದ್ದರೆ ಹೆಂಡತಿ ಮಕ್ಕಳನ್ನು ಕೊಲೆ ಮಾಡುವುದಾಗಿ, ಪತ್ನಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಕೆ ಹಾಕಿರುವುದಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಆಶ್ಲೀಲ ಭಾಷೆಯನ್ನು ಪ್ರಯೋಗಿಸಲಾಗಿದೆ.
ಈ ಪತ್ರ ಬರೆದವರನ್ನು ಪತ್ತೆ ಮಾಡಿ ಕಾನೂನು ಕ್ರಮಗೊಳ್ಳುವಂತೆ ಕೊತ್ತೂರು ಮಂಜುನಾಥ್ ಅವರು ಜು.4ರಂದು ಜಿಲ್ಲೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ತಿಳಿಸಿದ್ದರಲ್ಲದೆ ಹಾಗೂ ಎಸ್ಪಿ ಗಮನಕ್ಕೂ ತಂದಿದ್ದರು. ಎರಡು ದಿನಗಳ ಬಳಿಕ ಶಾಸಕ ಕೊತ್ತೂರು ಮಂಜುನಾಥ್ ಸದನದಲ್ಲಿ ತಮಗೆ ಬಂದಿರುವ ಬೆದರಿಕೆ ಪತ್ರವನ್ನು ಸ್ವೀಕರ್ಗೆ ನೀಡಿ ರಕ್ಷಣೆ ಕೋರಿದ್ದು ಏಕೆ? ಜಿಲ್ಲಾ ಪೊಲೀಸರಿಂದ ನ್ಯಾಯ ಸಿಗುವುದಿಲ್ಲವೆಂಬ ಅನುಮಾನವೇ? 4ರಂದೇ ಏಕೆ ಪತ್ರ ಬರೆದವರ ವಿರುದ್ಧ ಲಿಖಿತ ದೂರು ನೀಡಲಿಲ್ಲವೆಂಬುದಕ್ಕೆ ಶಾಸಕರೇ ಉತ್ತರಿಸಬೇಕಾಗಿದೆ.


ಸತ್ಯ ಬಯಲಾಗಬೇಕು
ದಲಿತ ರಕ್ಷಣಾ ಸಮಿತಿ ಮುಖಂಡ ಎಂ.ಎಸ್.ನಾರಾಯಣಸ್ವಾಮಿ ಶಾಸಕರಿಗೆ ಬರೆದಿರುವ ಪತ್ರಕ್ಕೂ ತಮಗೂ ಸಂಬಂಧವಿಲ್ಲವೆಂದು ಹೇಳಿಕೊಂಡಿದ್ದಾರೆ. ಲೆಟರ್ ಹೆಡ್ ದುರ್ಬಳಕೆ ಆಗಿರುವುದಾಗಿ ಆರೋಪಿಸಿದ್ದಾರೆ. ಈ ಕುರಿತು ದೂರು ನೀಡುವುದಾಗಿಯೂ ಹೇಳಿಕೊಂಡಿದ್ದಾರೆ. ಅದೇ ರೀತಿ ಶಾಸಕ ಮಂಜುನಾಥ್, ಪತ್ರ ಯಾರೇ ಬರೆದಿರಲಿ ಸೂಕ್ತ ತನಿಖೆ ಆಗಬೇಕು ಎಂದಿದ್ದಾರೆ. ಶಾಸಕರಿಗೆ ಬರೆದಿರುವ ಪತ್ರಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಹಿಲೋರಿ ವಿಶೇಷ ತನಿಖಾ ತಂಡ ರಚಿಸಿದ್ದಾರೆ. ಸತ್ಯ ತಿಳಿಯಲು ಶಾಸಕ ಮತ್ತು ಪತ್ರ ವಿವಾದದಲ್ಲಿ ಸಿಲುಕಿರುವ ನಾರಾಯಣಸ್ವಾಮಿ ಮಾತ್ರವಲ್ಲ ಜಿಲ್ಲೆಯ ಜನತೆ ಸಹ ಕುತೂಹಲದಿಂದ ಕಾಯುತ್ತಿದ್ದು ಅದಷ್ಟು ಬೇಗನೆ ಪತ್ರ ವಿವಾದಕ್ಕೆ ತಾತ್ವಿತ ಅಂತ್ಯ ಸಿಗಬಹುದೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement