ಶೀಲ ಶಂಕಿಸಿ ಪತ್ನಿ ಮರ್ಮಾಂಗಕ್ಕೆ ಬೆಂಕಿ ಇಟ್ಟ ಪತಿ, ಅತ್ತೆ, ಮೈದುನರು
ಕೋಲಾರ: ಶೀಲ ಶಂಕಿಸಿ ಗಂಡ, ಅತ್ತೆ ಮತ್ತು ಮೈದುನರು ಸೇರಿ ಮಹಿಳೆಯ ಮರ್ಮಾಂಗಕ್ಕೆ ಬೆಂಕಿ ಇಟ್ಟು ಕೊಲೆಗೆ ಯತ್ನಿಸಿರುವ ಪೈಶಾಚಿಕ ಕೃತ್ಯ ತಾಲೂಕಿನ ಮುದುವತ್ತಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ತೀವ್ರವಾಗಿ ಗಾಯಗೊಂಡಿರುವ ರೂಪಾ(26) ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಮಕ್ಕಳ ತಾಯಿ ಆಗಿರುವ ರೂಪಾ ಶೀಲ ಶಂಕಿಸಿ ಆಕೆಯ ಮೇಲೆ ದೌರ್ಜನ್ಯವೆಸಗಲಾಗಿದೆ. ರೂಪಾ ಅವರನ್ನು ಕೊಲೆ ಮಾಡುವ ಸಲುವಾಗಿ ಆಕೆ ಮೇಲೆ ಕಾರದ ಪುಡಿ, ಇಲಿಗಳನ್ನು ಹಿಡಿಯಲು ಬಳಸುವ ಪೆವಿಕಲ್ ಮೂಲಕ ಕೈ, ಕಾಲು ಬಂಧಿಸಿ ಮರ್ಮಾಂಗಕ್ಕೆ ಬೆಂಕಿ ಇಡಲಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಕೋಲಾರ ಗ್ರಾಮಾಂತರ ಠಾಣೆಯಲ್ಲಿ ರೂಪಾಳ ಪತಿ ಮುನಿರಾಜು, ಅತ್ತೆ ಸುಬ್ಬಮ್ಮ, ಮೈದುನರಾದ ಶ್ರೀರಾಮಪ್ಪ, ರಮೇಶ್ ವಿರುದ್ದ ದೂರು ದಾಖಲಾಗಿದೆ. ಮಹಿಳೆಯ ಶೀಲ ಶಂಕಿಸಿ ಪತಿ ಮತ್ತು ಆತನ ಕಡೆಯವರು ಅಮಾನುಷವಾಗಿ ನಡೆದುಕೊಂಡು ಕ್ರೂರವಾಗಿ ಹಿಂಸೆ ನೀಡಿ ಕೊಲೆ ಯತ್ನ ಮಾಡಿದ್ದು, ಆರೋಪಿಗಳನ್ನು ಬಂಧಿಸುವಂತೆ ಎಸ್ಎಸ್ಡಿ ಸಂಘಟನೆ ಮುಖಂಡರಾದ ಚಿನ್ನಪುರ ವೆಂಕಟೇಶ್ ಮತ್ತು ನಾಗರಾಜ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಒತ್ತಾಯಿಸಿದ್ದಾರೆ