20 ವಿದ್ಯಾರ್ಥಿಗಳಿಗೆ ಗಾಯ
ಚಿಂತಾಮಣಿ: ಖಾಸಗಿ ಶಾಲಾ ವಾಹನಕ್ಕೆ ಸರಕು ಸಾಗಾಣಿಕೆಯ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ತೀವ್ರ ಗಾಯಗೊಂಡಿರುವ ಘಟನೆ ಕೆಂಚಾರ್ಲಹಳ್ಳಿ ಪೋಲೀಸ್ ಠಾಣೆ ವ್ಯಾಪ್ತಿಯ ದಂಡುಪಾಳ್ಯ ಕ್ರಾಸ್ ಬಳಿ ಮಂಗಳವಾರ ನಡೆದಿದೆ. ನಗರದ ಹೊರವಲಯ ಬೂರಗಮಾಕಲಹಳ್ಳಿ ಬಳಿ ಇರುವ ಸೂರ್ಯ ವಿದ್ಯಾ ಸಂಸ್ಥೆಯ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಚಿಂತಾಮಣಿ - ಮದನಪಲ್ಲಿ ಮಾರ್ಗವಾಗಿ ಸ್ವಗ್ರಾಮಗಳಿಗೆ ಕರೆದೊಯ್ಯುತ್ತಿದ್ದ ಶಾಲಾ ವಾಹನಕ್ಕೆ ದಂಡುಪಾಳ್ಯ ಕ್ರಾಸ್ ಬಳಿ ಎದುರುಗಡೆಯಿಂದ ಬಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ 20ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು ಸಾರ್ವಜನಿಕ ಆಸ್ಪತ್ರೆ ಹಾಗೂ ಕೋಲಾರ ಆರ್.ಎಲ್.ಜಾಲಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗೊಯಗೊಂಡ ವಿದ್ಯಾರ್ಥಿಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ. ಘಟನಾ ಸ್ಥಳಕ್ಕೆ ಗ್ರಾಮಾಂತರ ಠಾಣೆಯ ವೃತ್ತನಿರೀಕ್ಷಕ ವೆಂಕಟೇಶ್ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು. ಕೆಂಚಾರ್ಲಹಳ್ಳಿ ಠಾಣೆಯ ಸಬ್ ಇನ್ಸ್ಪೆಕ್ಟ ರಾಜಣ್ಣ ಕೇಸು ದಾಖಲಿಸಿಕೊಂಡಿದ್ದಾರೆ.
ನಾಗರಿಕರಲ್ಲಿ ಡೆಂಘೀ ಭೀತಿ
ಚಿಂತಾಮಣಿ: ಚಿಂತಾಮಣಿಯಲ್ಲಿ ಡೆಂಘೀ ಜ್ವರ ರೋಗ ಹರಡುವ ಭೀತಿಯಿಂದ ನಾಗರಿಕರು ಆತಂಕದಲ್ಲಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಯಾವುದೇ ಕ್ರಮಗೊಳ್ಳುತ್ತಿಲ್ಲ ಎಂದು ನಾಗರಿಕರು ಆರೋಪಿಸಿದ್ದಾರೆ. ನಗರದ ವಿವಿಧ ಪ್ರದೇಶಗಳಲ್ಲಿ ಒಳಚರಂಡಿ ಸ್ವಚ್ಛತೆ ಇಲ್ಲದೆ, ಸೊಳ್ಳೆಗಳ ನಿಯಂತ್ರಣಕ್ಕೆ ಕಡಿವಾಣ ಹಾಕಿಲ್ಲ. ಅಲ್ಲದೆ, ಡೆಂಘೀ ಜ್ವರದ ಬಗ್ಗೆ ಅರಿವು ಮೂಡಿಸುವಲ್ಲೂ ಅಧಿಕಾರಿಗಳು ಆಸಕ್ತಿ ವಹಿಸುತ್ತಿಲ್ಲ. ಈಗಾಗಲೇ ನಗರದ ಗೋಷಾಗಲ್ಲಿ ನಿವಾಸಿಯೊಬ್ಬರಿಗೆ ಡೆಂಘೀ ತಗುಲಿದ್ದು, ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲವು ಪ್ರದೇಶಗಳಲ್ಲಿ ಒಳ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಹೀಗಿದ್ದಾಗ್ಯೂ ನಗರಸಭೆ ಅಧಿಕಾರಿಗಳು ಕಂಡು ಕಾಣದಂತೆ ವತಿಸುತ್ತಿದ್ದಾರೆ. ಕೂಡಲೇ ಅಧಿಕಾರಿಗಳು ಮುಂಜಾಗೃತೆ ಕ್ರಮಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಗುರು ಪೌರ್ಣಿಮೆ ಕಾರ್ಯಕ್ರಮ
ಚಿಂತಾಮಣಿ: ನಗರದ ಬ್ರಾಹ್ಮಣರ ಬೀದಿಯಲ್ಲಿರುವ ಶ್ರೀತಾಂಡವೇಶ್ವರ, ಶ್ರೀ ಶಾರದಾಮಾತೆ ಹಾಗೂ ಶಂಕರ ಭಗವತ್ಪಾದರ ಮೂರ್ತಿಗಳಿಗೆ ಗುರು ಪೌರ್ಣಿಮಿ ಪ್ರಯುಕ್ತ ಜು.12 ಶನಿವಾರ ಬೆಳಿಗ್ಗೆ 7.30 ಗಂಟೆಗೆ ಏಕವಾರ ರುದ್ರಾಭಿಷೇಕ, ಆರತಿ, ಮಹಾ ಮಂಗಳಾರತಿ ವಿಶೇಷ ಅಲಂಕಾರ ಹಾಗೂ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ ಎಂದು ಶ್ರೀ ಶಂಕರ ಮಠದ ಸಂಘಟಕರು ತಿಳಿಸಿದ್ದಾರೆ. ಚಿಂತಾಮಣಿ ನಗರದ ಎನ್.ಆರ್.ಬಡಾವಣೆಯಲ್ಲಿರುವ ಶ್ರೀ ಪಾಂಡುರಂಗಸ್ವಾಮಿಯ ದೇವಸ್ಥಾನದಲ್ಲಿ ಮಂಗಳವಾರ ಆಷಾಡ ಶುದ್ಧ ಏಕಾದಶಿ ಪ್ರಯುಕ್ತ ಶ್ರೀ ಕ್ಷೇತ್ರ ಪಂಡರಾಪುರ ಸಂಪ್ರದಾಯದಂತೆ ಬೆಳಿಗ್ಗೆ 7ಕ್ಕೆ ಅಭಿಷೇಕ, ವಿಶೇಷ ಅಲಂಕಾರ ಆರತಿ, ಮಹಾ ಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಬೆಳಿಗ್ಗೆ 9 ರಿಂದ 12 ಹಾಗೂ ಸಂಜೆ 4 ರಿಂದ 10 ಪಂಡರಾಪುರ ಸಂಪ್ರದಾಯದಂತೆ ಪಾಂಡುರಂಗಸ್ವಾಮಿಯ ಪಾದಸ್ಪರ್ಶ ಹಾಗೂ ಪುಷ್ಪಸಮರ್ಪಣೆ ನೂರಾರು ಭಕ್ತರು ಅರ್ಪಿಸಿದರು. ಸಂಜೆ 5 ರಿಂದ ಶ್ರೀ ವೈಷ್ಣವಿ ಭಜನಾ ಮಂಡಳಿಯಿಂದ ಭಜನೆ ನಡೆಯಿತು.
ಪದಾಧಿಕಾರಿಗಳ ಆಯ್ಕೆ
ಚಿಂತಾಮಣಿ: ತಾಲೂಕಿನ ಕೋನಕುಂಟ್ಲು ಕ್ಷೇತ್ರದ ಶ್ರೀ ಗಾಯತ್ರಿ ಮಹಿಳಾ ಪತ್ತಿನ ಸಹಕಾರ ಸಂಘದ 2014-15 ರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಎಸ್.ಮಂಜುಳ ,ಉಪಾಧ್ಯಕ್ಷರಾಗಿ ಸುಜಾತಾ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಜಿ.ಎಸ್.ಉಮಾ, ಜಿ.ಆರ್.ಸರಸ್ವತಮ್ಮ, ವೈದೇಹಿ, ಎಸ್.ಪದ್ಮಾವತಮ್ಮ, ಜಿ.ವಿ.ಭಾಗ್ಯಲಕ್ಷ್ಮಿ, ನಾಗಮಣಿ, ಎನ್.ಮಂಜುಳ, ಎನ್.ಎಸ್.ಮಂಜುಳ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಿಇಒ ಎನ್.ನಾಗಮಣಿ ತಿಳಿಸಿದ್ದಾರೆ.