22ರಿಂದ ಪೋಡಿ ಅದಾಲತ್
ಬಂಗಾರಪೇಟೆ: ಜು.22ರಂದು ತಾಲೂಕಿನ ಬೂದಿಕೋಟೆ ಹೋಬಳಿಯಲ್ಲಿ ಪೋಡಿ ಆಂದೋಲನ ಅದಾಲತ್ ನಡೆಯಲಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಹೇಳಿದ್ದಾರೆ.
ತಾಲೂಕು ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳಿಂದ ಎಲ್ಲ ತಾಲೂಕಿನಲ್ಲಿ ಪೋಡಿಗೆ ಸಂಬಂಧಿಸಿ ಸಾವಿರಾರು ಅರ್ಜಿಗಳು ಬಂದಿವೆ. ಇವು ಇತ್ಯರ್ಥವಾಗದೆ ರೈತರು ಹಲವು ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರ ತ್ವರಿತವಾಗಿ ಬಾಕಿ ಪ್ರಕರಣವನ್ನು ಬಗೆಹರಿಸಲು ಕಂದಾಯ ಅದಾಲತ್ ನಂತರ ಈಗ ಪೋಡಿ ಅದಾಲತ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಮೊದಲು ತಾಲೂಕಿನಲ್ಲಿ ಬೂದಿಕೋಟೆ ಹೋಬಳಿಯಲ್ಲಿ ನಡೆಯಲಿದೆ ನಂತರ ಇತರೇ ಹೋಬಳಿಗಳಲ್ಲಿ ನಡೆಯಲಿದೆ ಎಂದರು.
ಬೂದಿಕೋಟೆ ಹೋಬಳಿಯಲ್ಲಿ ಭೂ ಪರಿವರ್ತನೆಗೆ ಸಂಬಂಧಿಸಿದಂತೆ 28 ಅರ್ಜಿಗಳು, ಹದ್ದು ಬಸ್ತಿಗೆ 47 ಅರ್ಜಿಗಳು ಹಾಗೂ ದರಕಾಸ್ತುಗೆ ಸಂಬಂಧಿಸಿದಂತೆ ಸಾವಿರ ಅರ್ಜಿಗಳು ಬಂದಿವೆ. ಇವನ್ನು ಸರ್ವೆ ಮಾಡಿಸಲು 37 ನುರಿತ ಸರ್ವೆಯರ್ಗಳು ಹಾಗೂ 20 ಅಧಿಕಾರಿಗಳ ತಂಡ ಕಾರ್ಯನಿರ್ವಹಿಸಲಿದೆ. 22ರಂದು ಅದರ ವರದಿ ಅಂದಿನ ಸಭೆಯಲ್ಲಿ ಇಡಲಾಗುವುದು. ಇದರಲ್ಲಿ ಲೋಪದೋಷಗಳು ಇದ್ದಲ್ಲಿ ಅಂದೆ ಇತ್ಯರ್ಥ ಪಡಿಸಲಾಗುವುದು. ಈ ಕಾರ್ಯಕ್ರಮದಿಂದ ರೈತರು ವಿನಾಕಾರಣ ತಾಲೂಕು ಕಚೇರಿಗೆ, ಸರ್ವೆ ಕಚೇರಿಗಳಿಗೆ ಸುತ್ತುವುದು ನಿಲ್ಲುತ್ತದೆ. ಆದ್ದರಿಂದ ಈ ಅವಕಾಶವನ್ನು ಎಲ್ಲರು ಉಪಯೋಗಿಸಿಕೊಂಡು ವ್ಯಾಜ್ಯಗಳನ್ನು ಸ್ಥಳದಲ್ಲೇ ಬಗೆಹರಿಸಿಕೊಳ್ಳಿ ಎಂದರು.
ಪೋಡಿ ಅದಾಲತ್ ಮುಗಿಯುತ್ತಿದ್ದಂತೆ ಜಿಲ್ಲೆಯ ಎಲ್ಲ ಕೆರೆಗಳು ಮಳೆ ಅಭಾವದಿಂದಾಗಿ ಒಣಗಿದ್ದು ಕೆಲವರು ಕೆರೆ ಮತ್ತು ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಮಳೆ ಬಂದರೂ ನೀರು ಶೇಖರಣೆಯಾಗುತ್ತಿಲ್ಲ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಕೆರೆಗಳನ್ನು ರಕ್ಷಿಸಲು ಆಂದೋಲನ ಕಾರ್ಯಕ್ರಮ ಕೈಗೊಳ್ಳಲಾಗುವುದು. ಎಂಥ ಪ್ರಭಾವಿಗಳು ಈ ದಂಧೆಯಲ್ಲಿ ಭಾಗಿಯಾಗಿದ್ದರೂ ಮುಲಾಜಿಲ್ಲದೆ ತೆರವುಗೊಳಿಸಲಾಗುವುದು ಎಂದರು.