ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಪಿ ವಿರುದ್ಧ ನಾಳೆ ಬೀದಿಗಿಳಿದು ಹೋರಾಟ

Rashmi Kasaragodu
Updated On : 9 Jul 2014, 2:06 am

ಕನ್ನಡಪ್ರಭ ವಾರ್ತೆ, ಕೋಲಾರ, ಜು.8
ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಮರಳು ದಂಧೆಯನ್ನು ನಿಯಂತ್ರಿಸಲು ವಿಫಲವಾಗಿರುವ ಜಿಲ್ಲಾ ಎಸ್ಪಿ ಅಜಯ್ ಹಿಲೋರಿ ವಿರುದ್ಧ ಜು.10ರಂದು ಪ್ರತಿಭಟನೆ ನಡೆಸುವುದಾಗಿ ಕೆರೆಗಳ ಸಂರಕ್ಷಣಾ ಕ್ಷೇಮಾಭಿವೃದ್ಧಿ ಸಂಘದ ಮುಖಂಡ ಹಾಗೂ ಹೈಕೋರ್ಟಿನ ವಕೀಲ ಶಿವಪ್ರಕಾಶ್ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅಂತರ್ಜಲ ಸಮಸ್ಯೆಯಿಂದ ರೈತರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ, ಮರಳು ದಂಧೆಗೆ ಕಡಿವಾಣ ಹಾಕುವಂತೆ ಉಚ್ಚ ನ್ಯಾಯಾಲಯದಲ್ಲಿ 2012 ರಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು, ಅಧಿಕಾರಿಗಳು ನ್ಯಾಯಾಲಯಕ್ಕೆ ಅಗತ್ಯ ಮಾಹಿತಿ ಒದಗಿಸಲು ಕಾಳಜಿ ವಹಿಸಿಲ್ಲ ಎಂದು ಆರೋಪಿಸಿದರು.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಗೆ ವರ್ಗಾವಣೆಯಾಗಿ ಬಂದ ಜಿಲ್ಲಾ ಎಸ್ಪಿ ಅಜಯ್ ಹಿಲೋರಿ ಮರಳು ದಂಧೆ ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ, ಸರ್ಕಾರಿ ಅಧಿಕಾರಿಗಳು ಮಾತ್ರವಲ್ಲದೆ ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಜೊತೆ ದರ್ಪದಿಂದ ವರ್ತಿಸುತ್ತಿದ್ದಾರೆಂದು ದೂರಿದರು.
ಅಕ್ರಮ ಮರಳು ದಂಧೆಗೆ ಸಂಬಂಧಿಸಿದಂತೆ ಯಾವುದೇ ಎಫ್ಐಆರ್ಗಳನ್ನು ದಾಖಲು ಮಾಡಲು ಎಎಸ್ಪಿ ಜಮೀಲ್ ಅವರಿಗೆ ಅವಕಾಶ ನೀಡುತ್ತಿಲ್ಲ, ಪ್ರತಿಯೊಂದು ಪ್ರಕರಣದಲ್ಲಿ ತಮ್ಮ ಗಮನಕ್ಕೆ ತರಬೇಕೆಂದು ಆದೇಶಿಸಿದ್ದಾರೆ. ಇದರಿಂದ ಅಧಿಕಾರಿಗಳು  ಕಾನೂನು ರೀತಿ ಕೆಲಸ ನಿರ್ವಹಿಸುವುದಕ್ಕೆ ಕಷ್ಟವಾಗುತ್ತಿದೆ. ಜಿಲ್ಲಾಧಿಕಾರಿಗಳೇ ಸ್ವತಃ ಮರಳು ಲಾರಿ ಹಿಡಿದುಕೊಟ್ಟರು ಪೊಲೀಸರು ದೂರು ದಾಖಲು ಮಾಡುತ್ತಿಲ್ಲ, ಹಿರಿಯ ಅಧಿಕಾರಿಗಳಿಂದ ಆದೇಶ ಬರುವವರೆಗೂ ಮರಳು ಗಾಡಿಯ ಮೇಲೆ ಎಫ್ಐಆರ್ ದಾಖಲು ಮಾಡಲು ಪೊಲೀಸರು ಹೆದರುತ್ತಿದ್ದು ಇದಕ್ಕೆ ಎಸ್ಪಿಯವರ ದರ್ಪ ಕಾರಣವೆಂದು ಆರೋಪಿಸಿದರು.
ಮರಳು ಗಣಿಗಾರಿಕೆಯನ್ನು ತಡೆಯಲು ರಚಿಸಿರುವ ಸಮಿತಿಯಲ್ಲಿ ಪೊಲೀಸ್ ಇಲಾಖೆಯನ್ನು ಒಳಪಡಿಸಲಾಗಿದೆ. ಆದರೂ ಎಸ್ಪಿಯವರು ಮೌನಕ್ಕೆ ಶರಣಾಗಿರುವುದು ಗಮನಿಸಿದರೆ ಅನುಮಾನ ಮೂಡಿಸುತ್ತದೆ, ಸಾರ್ವಜನಿಕರ ಜೊತೆಯಲ್ಲೂ ಸಂಪರ್ಕವಿಲ್ಲದೆ ಕೇವಲ ಕಚೇರಿಯಲ್ಲಿ ಕುಳಿತು ಕೆಲಸ ಮಾಡುತ್ತಿರುವ ಎಸ್ಪಿಯವರಿಗೆ ಜಿಲ್ಲೆಯ ಹಿತ ಕಾಪಾಡಲು ಆಗದಿದ್ದರೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಲಿ ಎಂದು ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆಗೆ ಪ್ರದಕ್ಷಿಣೆ ಹಾಕಲು ಮಾತ್ರ ಬರುತ್ತಿದ್ದು, ಕಳೆದ ಒಂದು ವರ್ಷದಿಂದ ಜಿಲ್ಲೆಯಲ್ಲಿ ಯಾವುದೇ ಒಂದು ಘನಂದಾರಿ ಕೆಲಸ ಮಾಡಿಲ್ಲವೆಂದು ಲೇವಡಿ ಮಾಡಿದರು. ಜಿಲ್ಲೆಯಲ್ಲಿ ಮರಳು ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರೂ ಸಹ ಇದುವರೆಗೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಮತ್ತು ಜಿಲ್ಲಾ ಎಸ್ಪಿ ವಿರುದ್ಧ ಅನೇಕ ದೂರುಗಳಿದ್ದರೂ ಕನಿಷ್ಠ ಎಚ್ಚರಿಕೆಯನ್ನು ನೀಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಯಾವೊಬ್ಬ ಶಾಸಕರು ಸಹ ಅಕ್ರಮ ಮರಳು ಸಾಗಾಣೆ ವಿರುದ್ಧ ದನಿ ಎತ್ತುತ್ತಿಲ್ಲ, ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಗಳಿಗೆ ನೀಡಲಾಗುವುದೆಂದು ಅವರು ತಿಳಿಸಿದರು. ಜು.10ರೊಳಗೆ ಎಸ್ಪಿಯವರು ಮರಳು ದಂಧೆ ತಡೆಯಲು ಕಾನೂನಾತ್ಮಕ ಕ್ರಮ ಕೈಗೊಳ್ಳದಿದ್ದರೆ ಎಸ್ಪಿ ವಿರುದ್ಧ ಹೋರಾಟ ಮಾಡುವುದು ನಿಲ್ಲದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ವಕೀಲ ಕೆ. ಮುನಿಸ್ವಾಮಿಗೌಡ, ಸಸ್ಯ ಸಂಜೀವಿನ ಸಂಘದ ಹುಲ್ಲುನಾಚೇಗೌಡ, ಕೆರೆ ಮತ್ತು ಸಂರಕ್ಷಣಾ ಕ್ಷೇಮಾಭಿವೃದ್ಧಿ ಸಂಘದ ರಘು, ವೆಂಕಟಾಚಲ, ವಕೀಲ ಪ್ರಭಾಕರ್, ಪ್ರಸನ್ನ ಕುಮಾರ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement