ಗ್ರಾಪಂ ಪುನರ್ ವಿಂಗಡಣೆ: ಸೆಪ್ಟೆಂಬರ್ನಲ್ಲಿ ಸರ್ಕಾರಕ್ಕೆ ವರದಿ
ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಗ್ರಾಮ ಪಂಚಾಯಿತಿಗಳ ಪುನರ್ ವಿಂಗಡಣೆಯ ಅಹವಾಲುಗಳನ್ನು ಸ್ವೀಕರಿಸಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ ಮೊದಲ ವಾರದಲ್ಲಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯತ್ಗಳ ಪುನರ್ವಿಂಗಡಣಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನ ಮಠ ತಿಳಿಸಿದರು.
ಜಿ.ಪಂ. ಅಧ್ಯಕ್ಷರ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ 1991 ರ ಜನಗಣತಿಯ ಆಧಾರದ ಮೇಲೆ ರಾಜ್ಯದಲ್ಲಿ 5679 ಗ್ರಾಮ ಪಂಚಾಯ್ತಿಗಳು ಕಾರ್ಯ ನಿರ್ವಹಿಸುತ್ತಿವೆ. ಇದರಿಂದ ಕೆಲಸ ಕಾರ್ಯಗಳ ನಿರ್ವಹಣೆಗೆ ತೊಡಕಾಗಿದ್ದು ಬಯಲು ಸೀಮೆ ಪ್ರದೇಶಗಳಲ್ಲಿ ಪ್ರತಿ 5 ಸಾವಿರದಿಂದ 7 ಸಾವಿರವರೆಗಿನ ಜನಸಂಖ್ಯೆಗೆ ಒಂದು ಗ್ರಾಮ ಪಂಚಾಯಿತಿ ಹಾಗೂ ಮಲೆನಾಡು ಪ್ರದೇಶದಲ್ಲಿ ಪ್ರತಿ 2500 ರಿಂದ 3 ಸಾವಿರ ವರೆಗಿನ ಜನಸಂಖ್ಯೆ ಇರಬೇಕು. ಇನ್ನೂ 20 ವರ್ಷಗಳ ಹಿಂದಿನ ಜನಗಣತಿಯಲ್ಲಿರುವುದರಿಂದ ಗ್ರಾ.ಪಂ.ಗಳಲ್ಲಿ ಪಂಚಾಯತ್ ರಾಜ್ ನಿಯಮಾನುಸಾರ ಲೋಪದೋಷಗಳು ಕಂಡು ಬಂದಿವೆ. ಒಂದು ಕಡೆ 7 ಸಾವಿರ ಜನಸಂಖ್ಯೆಯನ್ನು ಮೀರಿದರೆ, ಕೆಲವೆಡೆ ಗ್ರಾ.ಪಂ.ಯಲ್ಲಿ ಜನಸಂಖ್ಯೆ ಕಡಿಮೆ ಇದೆ.ಅಲ್ಲದೇ 2005 ರಲ್ಲಿ ಗ್ರಾ.ಪಂ.ಚುನಾವಣೆಗಳು ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಉತ್ತಮ ಆಡಳಿತ, ಮೂಲ ಸೌಕರ್ಯಗಳ ಅಭಿವೃದ್ಧಿ, ಶಕ್ತಿಸೌಧವನ್ನಾಗಿಸುವ ಉದ್ದೇಶದಿಂದ ಗ್ರಾಮ ಪಂಚಾಯ್ತಿಗಳ ಪುನರ್ ವಿಂಗಡಣೆ, ಪರಿಷ್ಕರಣೆ ಹಾಗೂ ಕೇಂದ್ರಸ್ಥಾನ ಬದಲಾವಣೆ ಮಾಡುವ ಸಲುವಾಗಿ ಸರ್ಕಾರವು 6 ಜನರನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ತಾವು ಇದರ ಅಧ್ಯಕ್ಷರಾಗಿದ್ದು ಈಗಾಗಲೇ ಈ ಸಮಿತಿಯು ಕಳೆದ ಒಂದು ತಿಂಗಳಿಂದ ರಾಜ್ಯದ 29 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ರಾಜಕೀಯ ಪಕ್ಷಗಳು, ಗ್ರಾಮ ಪಂಚಾಯ್ತಿಗಳು ಹಾಗೂ ಸಾರ್ವಜನಿಕರಿಂದ ಈವರೆಗೆ ಸುಮಾರು 1585 ಅರ್ಜಿಗಳನ್ನು ಸ್ವೀಕರಿಸಿದೆ ಎಂದರು.
ಪ್ರಸ್ತುತ 28 ಜಿಲ್ಲೆಗಳಲ್ಲಿ ಪ್ರವಾಸ ಮುಗಿಸಿದ್ದು ಚಿಕ್ಕಬಳ್ಳಾಪುರ ಮತ್ತು ಕೋಲಾರದಲ್ಲಿ ಅಹವಾಲು ಸ್ವೀಕರಿಸಲಾಗುತ್ತಿದೆ. ಇಲ್ಲಿ ಈ ಸಂಬಂಧ ಒಟ್ಟು 10 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅತಿ ಹೆಚ್ಚು 262 ಅರ್ಜಿಗಳು ಬೆಳಗಾವಿ ಜಿಲ್ಲೆಯಿಂದ ಸ್ವೀಕೃತವಾಗಿದ್ದು 252 ಅಹವಾಲುಗಳನ್ನು ಸಮಿತಿಗೆ ಸಲ್ಲಿಸಿರುವ ಗುಲ್ಬರ್ಗಾ ಜಿಲ್ಲೆಯು ದ್ವಿತೀಯ ಸ್ಥಾನದಲ್ಲಿದೆ. ಅಂತಿಮವಾಗಿ ಕೋಲಾರ ಜಿಲ್ಲೆಯಲ್ಲಿ ಅಹವಾಲು ಸ್ವೀಕರಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯ್ತಿಗಳನ್ನು ಸದೃಢಗೊಳಿಸುವುದು ಸರ್ಕಾರದ ಉದ್ದೇಶವಾಗಿದ್ದು ಸಮಿತಿಯು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆಯೆಂದು ತಿಳಿಸಿದ ನಂಜಯ್ಯನಮಠ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ವಿವಿಧ ವಾಣಿಜ್ಯ ಕೇಂದ್ರಗಳಾದ ಖಾಸಗಿ ಬಸ್ ನಿಲ್ದಾಣ, ವಾಣಿಜ್ಯ ಮಳಿಗೆಗಳಿಂದ ಕರ ವಸೂಲಿ ಅಧಿಕಾರವನ್ನು ಗ್ರಾಮ ಪಂಚಾಯ್ತಿಗಳಿಗೆ ನೀಡಿ ತನ್ಮೂಲಕ ಗ್ರಾಮ ಪಂಚಾಯ್ತಿಗಳನ್ನು ಆರ್ಥಿಕವಾಗಿ ಸಶಕ್ತಗೊಳಿಸಲು ಉದ್ದೇಶಿಸಿದೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ಒಟ್ಟು 5629 ಗ್ರಾಮ ಪಂಚಾಯ್ತಿಗಳಿದ್ದು ಮುಂದಿನ ದಿನಗಳಲ್ಲಿ ಕನಿಷ್ಠ ಇನ್ನು 300 ನೂತನ ಗ್ರಾಮ ಪಂಚಾಯ್ತಿಗಳ ರಚನೆಯಾಗಲಿವೆ ಎಂದರು. ಆಗಸ್ಟ್ನಲ್ಲಿ ವರದಿಯನ್ನು ಪರಿಷ್ಕರಿಸಿ ಸೆಪ್ಟಂಬರ್ ಮೊದಲ ವಾರದಲ್ಲಿ ಸಲ್ಲಿಸಲಿದ್ದು ಸರ್ಕಾರ ತ್ವರಿತವಾಗಿಯೇ ಒಪ್ಪಿಕೊಳ್ಳುವ ವಿಶ್ವಾಸವಿದೆ. ಇದೇ ಆಧಾರದ ಮೇಲೆ 2005 ರಲ್ಲಿ ಗ್ರಾ.ಪಂ.ಚುನಾವಣೆಗಳು ನಡೆಯಲಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯರಾದ ಬಿ.ಸಿ. ಶಿವಾನಂದ ಮಂಡ್ಯ, ಎಸ್ .ಕೆ. ಭಾಗವತ್ ಸಿರಸಿ, ಎ.ಆರ್ . ಸುಧಾಮಣಿ, ಹುಣಸೂರು, ಜಿ.ಪಂ. ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ ಹಾಗೂ ಸಿಇಓ ನೀಲಾ ಮಂಜುನಾಥ್ ಉಪಸ್ಥಿತರಿದ್ದರು.