ಗ್ರಾಪಂ ಪುನರ್ವಿಂಗಡಣೆ ಸಮಿತಿ ಪ್ರವಾಸ
ಕೋಲಾರ: ಪ್ರಸ್ತುತ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳನ್ನು ಪುನರ್ ವಿಂಗಡಣೆ ಮಾಡುವ ಸಂಬಂಧ ರಾಜ್ಯದಾಧ್ಯಂತ ಅಭಿಪ್ರಾಯ,ಅಕ್ಷೇಪಣೆಗಳನ್ನು ಸಂಗ್ರಹಿಸಲಾಗುತ್ತಿದ್ದು, ಆಗಸ್ಟ್ ಕೊನೆಯ ವಾರ ಇಲ್ಲವೆ ಸೆ.1ರಂದು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸುವುದಾಗಿ ಗ್ರಾಪಂ ಪುನರ್ ವಿಂಗಡಣಾ ಸಮಿತಿ ಅಧ್ಯಕ್ಷ ಎಸ್.ಜಿ.ನಂಜಯ್ಯ ಮಠ ತಿಳಿಸಿದರು. ಜಿಪಂನಲ್ಲಿ ಮಂಗಳವಾರ ಗ್ರಾಪಂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಅರ್ಜಿ ಹಾಗೂ ಅಕ್ಷೇಪಣೆಗಳನ್ನು ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 1991ರಲ್ಲಿ ಆಗಿನ ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂಗಳನ್ನು ರಚಿಸಲಾಗಿದೆ. ಪ್ರಸ್ತುತ ಜನಸಂಖ್ಯೆ ಹೆಚ್ಚಾಗಿರುವುದರಿಂದ ಗ್ರಾಪಂ ಪುನರ್ವಿಂಗಡಣೆಗಾಗಿ ಪ್ರವಾಸ ಕೈಗೊಂಡಿರುವುದಾಗಿ ಹೇಳಿದರು. ಈ ಹಿಂದೆ ಒಂದು ಪಂಚಾಯಿತಿ ವ್ಯಾಪ್ತಿಗೆ 5ರಿಂದ 6 ಸಾವಿರ ಜನಸಂಖ್ಯೆ ಒಳಪಟ್ಟಿತ್ತು. ಈಗ ಕೆಲವು ಗ್ರಾಪಂ ವ್ಯಾಪ್ತಿಯಲ್ಲಿ 12 ರಿಂದ 15 ಸಾವಿರ ಮೀರಿದೆ. ಹೀಗಾಗಿ ಜನಸಂಖ್ಯೆಗೆ ಅನುಗುಣವಾಗಿ ಗ್ರಾಪಂ ಪುನರ್ ವಿಂಗಡಣೆ ಅಗತ್ಯವಾಗಿದೆ. ಮುಂದಿನ 2015ರಲ್ಲಿ ನಡೆಯುವ ಗ್ರಾಪಂ ಚುನಾವಣೆಗಳನ್ನು ಪ್ರಸಕ್ತ ಜನಸಂಖ್ಯೆಗೆ ಅನುಗುಣವಾಗಿ ನಡೆಸಲು ಸರ್ಕಾರ ನಿರ್ಧರಿಸಿರುವುದರಿಂದ ಸಮಿತಿಯು ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಲಿದೆ ಎಂದರು. ಕಳೆದ ಮೇ.19ರಿಂದ ರಾಜ್ಯದಲ್ಲಿ ಪ್ರವಾಸ ಕೈಗೊಳ್ಳಲಾಗಿದೆ. ಕೊನೆ ಜಿಲ್ಲೆ ಕೋಲಾರವಾಗಿದೆ. ಜಿಲ್ಲೆಯಲ್ಲಿ ಒಟ್ಟು 69 ಅರ್ಜಿಗಳು ಸ್ವೀಕೃತವಾಗಿದ್ದು 66 ಅರ್ಜಿದಾರರು ದೂರದಲ್ಲಿನ ಹಳ್ಳಿಗಳನ್ನು ಹತ್ತಿದ ಗ್ರಾಪಂಗಳಿಗೆ ಸೇರಿಸಲು ಹಾಗೂ ಮೂವರು ಗ್ರಾಪಂಗಳನ್ನು ಸ್ಥಳಾಂತರಿಸಲು ಕೋರಿದ್ದಾರೆ. ಕೋಲಾರ ತಾಲೂಕಿನಲ್ಲಿ 15,ಮುಳಬಾಗಿಲು 11,ಶ್ರೀನಿವಾಸಪುರ11,ಬಂಗಾರಪೇಟೆ-16 ಹಾಗೂ ಮಾಲೂರು16 ಅರ್ಜಿಗಳು ಬಂದಿವೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಜಂಟಿ ಕಾರ್ಯದರ್ಶಿ ದೇವಯ್ಯ ಒಡೆಯರ್, ಸದಸ್ಯ ಸುಧಾಮಣಿ, ಭಾಗವತರ್ ಹಾಗೂ ಜಿಪಂ ಉಪಕಾರ್ಯದರ್ಶಿ ಆರೆ ೂಕ್ಯಸ್ವಾಮಿ ಇದ್ದರು.
ಅನುಚಿತ ವರ್ತನೆ:
ಬಿಇಒ ವಿಷಾದ
ಚಿಂತಾಮಣಿ: ಮುಖ್ಯ ಶಿಕ್ಷಕರ ಜತೆ ಅನುಚಿತವಾಗಿ ವರ್ತಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಕ್ಷಮೆಯಾಚಿಸಿದ ಘಟನೆ ಬೆಳಕಿಗೆ ಬಂದಿದೆ. ತಾಲೂಕಿನ ಮುಂಗಾನಹಳ್ಳಿ ಹೋಬಳಿ ಬಟ್ಲಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜನಾರ್ದನ ಅವರು ಕಳೆದ ಶನಿವಾರ ನಗರದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿದ್ದರು. ವಿದ್ಯಾರ್ಥಿಗಳ ಸಮವಸ್ತ್ರ ವಿತರಣೆಗೆ ಸಂಬಂಧಿಸಿದಂತೆ ಚರ್ಚಿಸುತ್ತಿರುವಾಗ ಬಿಇಒ ಕೆ.ಜಿ. ರಂಗಯ್ಯ ಅವರು ಏಕಾಏಕಿಯಾಗಿ ಅನುಚಿತವಾಗಿ ವರ್ತಿಸಿ, ಮುಖ್ಯ ಶಿಕ್ಷಕರನ್ನು ನಿಂದಿಸಿದ್ದರು.ಇದರಿಂದ ಮನನೊಂದಿದ್ದ ಮುಖ್ಯ ಶಿಕ್ಷಕ ಜನಾರ್ದನ್ ಅವರು, ತಮಗಾದ ಅನ್ಯಾಯವನ್ನು ಶಿಕ್ಷಕ ಸಂಘಟನೆಗಳೊಂದಿಗೆ ಹಂಚಿಕೊಂಡಿದ್ದರು. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ನೇಹಿತರು ಹಾಗೂ ಹಿತೈಷಿಗಳೊಂದಿಗೆ ಸೋಮವಾರ ಬಿಇಒ ಕಚೇರಿಯಲ್ಲಿ ಸಭೆ ಸೇರಿದ್ದರು. ಈ ಸಭೆಯಲ್ಲಿ ರಾಜ್ಯ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಉಪಾಧ್ಯಕ್ಷ ಆರ್. ವೆಂಕಟರಮಣರೆಡ್ಡಿ, ಶಿಕ್ಷಕರ ಒಕ್ಕೂಟದ ಸುಬ್ಬಾರೆಡ್ಡಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮಂಜುನಾಥ್ ಇನ್ನೂ ಅನೇಕರು ಭಾಗವಹಿಸಿದ್ದರು.
ವಿಷಾದ ವ್ಯಕ್ತಪಡಿಸಿದ ಬಿಇಒ: ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಜನಾರ್ದನ ಅವರ ವಿರುದ್ಧ ಹರಿಹಾಯ್ದೆ. ಇದನ್ನೇ ದೊಡ್ಡ ವಿಷಯ ಮಾಡಬೇಡಿ. ಇದಕ್ಕಾಗಿ ನಾನು ವಿಷಾದಿಸುತ್ತೇನೆ ಎಂದು ಬಿಇಒ ರಂಗಯ್ಯ ಅವರು ಸಭೆಯಲ್ಲಿ ತಿಳಿಸಿದರು.