ಬೆಸ್ಕಾಂ ಉಪಟಳಕ್ಕೆ ಗ್ರಾಹಕ ತತ್ತರ
ಕೋಲಾರ ಜಿಲ್ಲೆಗೆ ದಿನಕ್ಕೆ 150ರಿಂದ 180 ಮೆಗಾವ್ಯಾಟ್ವಿದ್ಯುತ್ ಅಗತ್ಯ, ಪೂರೈಕೆ ಆಗುತ್ತಿರುವುದು 40ರಿಂದ60 ಮೆಗಾವ್ಯಾಟ್ ಮಾತ್ರ, ಬೆಸ್ಕಾಂ ಉಪಟಳಕ್ಕೆ ಗ್ರಾಹಕ ತತ್ತರ
ಕೋಲಾರ: ಬೆಸ್ಕಾಂ ಉಪಟಳದಿಂದ ಗ್ರಾಹಕರು ತತ್ತರಿಸುವಂತಾಗಿದೆ.
ಕಳೆದ ಐದಾರು ವರ್ಷಗಳಿಂದ ಅವೈಜ್ಞಾನಿಕ ಲೋಡ್ಶೆಡ್ಡಿಂಗ್ ವಿರುದ್ಧ ಕೋಲಾರ ಜಿಲ್ಲೆಯ ಜನತೆ ತಮ್ಮ ಶಕ್ತಾನುಸಾರ ಪ್ರತಿಭಟನೆಗಳನ್ನು ನಡೆಸಿ, ಗುಣಮಟ್ಟದ ವಿದ್ಯುತ್ ನೀಡುವಂತೆ ಒತ್ತಾಯಿಸುತ್ತಿದ್ದರೂ ಬೆಸ್ಕಾಂ ಗ್ರಾಹಕರ ಪರವಾಗಿ ನಿರ್ಣಯಗಳನ್ನು ಕೈಗೊಳ್ಳಲು ವಿಫಲವಾಗಿದೆ.
ಸರ್ಕಾರ ವಿದ್ಯುತ್ ಇಲಾಖೆಯ ಮೇಲೆ ಹಿಡಿತ ಕಳೆದುಕೊಂಡಂತೆ ವರ್ತಿಸುತ್ತಿದೆ. ಕೆಪಿಟಿಸಿಎಲ್ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಕೈಗಾರಿಕೆಗಳ ಮಾಲೀಕರ ಲಾಬಿಗೆ ಮಣಿದು ತನಗಿಷ್ಟ ಬಂದಂತೆ ವಿದ್ಯುತ್ ಪೂರೈಕೆ ಹಾಗೂ ಬೆಲೆ ಏರಿಕೆ ಮಾಡುವ ಮೂಲಕ ಗ್ರಾಹಕರ ಹಿತ ಕಡೆಗಣಿಸುತ್ತಿದೆ.
ಕೋಲಾರ ಜಿಲ್ಲೆಗೆ 150ರಿಂದ 180 ಮೆಗಾವ್ಯಾಟ್ ವಿದ್ಯುತ್ ಬೇಕಾಗಿದ್ದು, ಕೇವಲ 40ರಿಂದ 60 ಮೆಗಾವ್ಯಾಟ್ ವಿದ್ಯುತ್ ನೀಡುತ್ತಿರುವುದರಿಂದ ಅನೆ ಹೊಟ್ಟೆಗೆ ಅರೆಕಾಸು ಮಜ್ಜಿಗೆ ಎಂಬಂತಾಗಿದೆ. ವಿದ್ಯುತ್ ಸಮಸ್ಯೆಗೂ ನಮಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಜನಪ್ರತಿನಿಧಿಗಳು ಸಹ ಗ್ರಾಹಕರನ್ನು ನಿರ್ಲಕ್ಷಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಇದೇ ರೀತಿ ವಿದ್ಯುತ್ ಲೋಡ್ಶೆಡ್ಡಿಂಗ್ ಆಗುತ್ತಿದ್ದಾಗ ಹೆಣ್ಣು ಮಗಳು ಎಂಬ ಕನಿಷ್ಠ ಗೌರವ ಇಲ್ಲದೆ ಇಂಧನ ಸಚಿವೆ ಆಗಿದ್ದ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅಸಭ್ಯವಾಗಿ ಘೋಷಣೆಗಳನ್ನು ಕೂಗಿ ಬೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ವೀರಾವೇಷದಿಂದ ಹೋರಾಡಿದ್ದ ವಿರೋಧ ಪಕ್ಷದವರು ಈಗ ಆಡಳಿತ ಪಕ್ಷದಲ್ಲಿ ಇದ್ದರೂ, ವಿದ್ಯುತ್ ಸಮಸ್ಯೆ ನಿವಾರಣೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರದೆ ಅಸಹಾಯಕರಾಗಿದ್ದಾರೆ.
ಮೌನಕ್ಕೆ ಶರಣು: ಜೆಡಿಎಸ್ನ ಜಿಲ್ಲಾ ಮುಖಂಡರು ಸಹ ಮೌನಕ್ಕೆ ಶರಣಾಗಿದ್ದಾರೆ. ಈ ಹಿಂದೆ ತಮ್ಮ ಸರ್ಕಾರದ ಮಾನ-ಮಾರ್ಯದೆ ಹರಾಜು ಹಾಕಿದ್ದವರ ವಿರುದ್ಧ ದನಿ ಎತ್ತದೆ ಬಿಜೆಪಿಯ ಮುಖಂಡರು ಸಹ ಸಾಮಾಜಿಕ ಆಂದೋಲನಗಳಿಂದ ದೂರ ಉಳಿದಿರುವುದರಿಂದ ಜಿಲ್ಲೆಯ ಜನತೆ ಹಿತ ಕಾಪಾಡುವವರು ಇಲ್ಲದಂತಾಗಿದೆ.
ಕೋಲಾರ ಜಿಲ್ಲೆ ಬರ ಪೀಡಿತ ಪ್ರದೇಶವೆಂಬುದು ಸರ್ಕಾರಕ್ಕೆ ಗೊತ್ತಿರುವ ಸಂಗತಿ. ಅಂತರ್ಜಲ ಪಾತಾಳ ಸೇರಿದ್ದರೂ ಅದನ್ನೇ ನಂಬಿ ಕೃಷಿ ಮಾಡುತ್ತಿರುವ ರೈತರಿಗೆ ಬೆಸ್ಕಾಂನಿಂದ ದಿನಕ್ಕೆ ಕನಿಷ್ಠ ನಾಲ್ಕೈದು ಗಂಟೆ ಗುಣಾತ್ಮಕ ವಿದ್ಯುತ್ ಸಿಗುತ್ತಿಲ್ಲ. ಇದರಿಂದಾಗಿ ರೈತರು ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಕಾಟಾಚಾರದ ಅದಾಲತ್
ಗ್ರಾಹಕರ ಅದಾಲತ್ ಕೇವಲ ಕಾಟಾಚಾರಕ್ಕೆ ನಡೆಯುತ್ತಿದೆ. ಪ್ರತಿಬಾರಿ ಅದಾಲತ್ ನಡೆಸಿದಾಗ ಮೂರು-ನಾಲ್ಕು ಜನ ಸಹ ಇರುವುದಿಲ್ಲ. ಆದರೂ ಅದಾಲತ್ಗಾಗಿ ರು. 10ರಿಂದ 20 ಸಾವಿರ ಖರ್ಚು ತೋರಿಸಲಾಗುತ್ತಿದೆ. ಇನ್ನು ಮುಂದೆ ಬೆಸ್ಕಾಂ ಗ್ರಾಹಕರ ಅದಾಲತ್ ಸಂಸ್ಥೆ ಹಿರಿಯ ಅಧಿಕಾರಿಗಳ ಸಮಕ್ಷಮದಲ್ಲೇ ನಡೆಯಬೇಕು. ಕೇವಲ ಅರ್ಜಿಗಳನ್ನು ಸ್ವೀಕರಿಸುವುದಷ್ಟೇ ಅಲ್ಲದೆ ವಿದ್ಯುತ್ ಸಮಸ್ಯೆಯಿಂದ ಆಗುತ್ತಿರುವ ತೊಂದರೆಗಳ ನಿವಾರಣೆಗೆ ಕ್ರಮ ಕೈಗೊಳ್ಳುವಂತಾದರೆ ಮಾತ್ರ ವಿದ್ಯುತ್ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಲೋಡ್ ಶೆಡ್ಡಿಂಗ್ ಮಾಡುವುದಕ್ಕೆ ಗ್ರಾಹಕರ ವಿರೋಧವಿಲ್ಲ. ಆದರೆ, ವೇಳಾಪಟ್ಟಿ ಪ್ರಕಟಿಸದೆ ನಿಮಿಷಕ್ಕೊಮ್ಮೆ, ಅರ್ಧ ಗಂಟೆ, ಒಂದು ಗಂಟೆಗೊಮ್ಮೆ ವಿದ್ಯುತ್ ಕಡಿತ ಮಾಡುವುದರಿಂದ ಕಿರಿಕಿರಿ ಉಂಟಾಗುತ್ತಿದೆ. ಜೊತೆಗೆ ದುರಸ್ತಿ ನೆಪದಲ್ಲಿ ಬೆಳಿಗ್ಗೆ 9ರಿಂದ ಸಂಜೆ 6ಗಂಟೆ ಇಲ್ಲವೇ 7ಗಂಟೆಯವರೆಗೆ ಜನರನ್ನು ಕತ್ತಲಿನಲ್ಲಿ ಇಡುವುದರಿಂದ ಆಗುವ ಅನಾಹುತಗಳನ್ನು ಮನಗೊಂಡು ಕೋಲಾರ ಜಿಲ್ಲೆಗೆ ಗುಣಾತ್ಮಕ ವಿದ್ಯುತ್ ಪೂರೈಕೆ ಮಾಡಬೇಕೆಂಬುದು ಗ್ರಾಹಕರ ಒತ್ತಾಸೆಯಾಗಿದೆ