ಸಾಮೂಹಿಕ ವಿವಾಹ ಆ.15ಕ್ಕೆ
ಕೋಲಾರ: ಶ್ರೀ ಶಂಕರ್ ಫೌಂಡೇಶನ್ ಆಶ್ರಯದಲ್ಲಿ ಆ.15 ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಂಕರ ಟಿವಿಯ ಮುಖ್ಯಸ್ಥ ಟಿ.ಎಂ. ಬಾಲಕೃಷ್ಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮೂಹಿಕ ವಿವಾಹದಲ್ಲಿ ಅರ್ಹ 108 ಜೋಡಿಗಳಿಗೆ ಕಂಕಣ ಭಾಗ್ಯ ಕಲ್ಪಿಸಲಾಗುತ್ತಿದ್ದು ವಧು-ವರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು. ಸರ್ಕಾರದ ನಿಯಮಗಳ ಅನುಸಾರ ವಿವಾಹಗಳನ್ನು ಮಾಡಲಾಗುವುದೆಂದ ಅವರು, ಇತ್ತೀಚೆಗೆ ಸಾಮೂಹಿಕ ವಿವಾಹದಲ್ಲಿ ಆಗುತ್ತಿರುವ ಅವಾಂತರಗಳನ್ನು ಗಮನಿಸಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಲು ನಿರ್ಧರಿಸಲಾಗಿದೆ. ಬಾಲವಿವಾಹ, ಪುರ್ನವಿವಾಹಗಳಿಗೆ ಅವಕಾಶವಿರುವುದಿಲ್ಲವೆಂದರು. ಅಕ್ರಮ ಮದುವೆಗಳಿಗೆ ಅವಕಾಶವಿಲ್ಲ, ವಧು-ವರರು ಕಡ್ಡಾಯವಾಗಿ ತಂದೆ ತಾಯಿಗಳಿಂದ ಒಪ್ಪಿಗೆಯನ್ನು ಪಡೆದಿರಬೇಕು, ವಯಸ್ಸಿನ ದೃಢೀಕರಣ ಪತ್ರವನ್ನು ನೀಡಬೇಕು. ವಿವಾಹವನ್ನು ಹಿಂದು ಧಾರ್ಮಿಕ ಪದ್ಧತಿಯಲ್ಲಿ ಸಂಪ್ರದಾಯಬದ್ಧವಾಗಿ ನಡೆಸಲಾಗುತ್ತದೆ ಎಂದು ವಿವರಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳನ್ನು ಆಹ್ವಾನಿಸಲಾಗಿದೆ ಎಂದ ಅವರು, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದು, ಮೂರು ದಿನಗಳ ಕಾಲ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಪಲ್ಲವಿ ಮಣಿ, ಶಂಕರ್ ಟಿವಿ ಮುಖ್ಯ ಸಂಪರ್ಕಾಧಿಕಾರಿ ಪವನ್ ಎಸ್. ರಮೇಶ್ ಇದ್ದರು.