ಸಾರ್ವಜನಿಕ ಆಸ್ಪತ್ರೆಗೆ ಸಕ್ಸೆನಾ ಹಠಾತ್ ಭೇಟಿ
ಬಂಗಾರಪೇಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯೆ ಮೀರಾ ಸಕ್ಸೆನಾ ಮಂಗಳವಾರ ಹಠಾತ್ ಭೇಟಿ ನೀಡಿ ಆಸ್ಪತ್ರೆಯಲ್ಲಿನ ನೂನ್ಯತೆಗಳನ್ನು ಪರಿಶೀಲಿಸಿದರು.
ಎಲ್ಲ ವಾರ್ಡ್ಗಳಿಗೆ ಹಾಗೂ ಎಕ್ಸ್ರೆ ಕೊಠಡಿಗೆ ಭೇಟಿ ನೀಡಿದರಲ್ಲದೆ ಹೊರ ರೋಗಿಗಳನ್ನು ಭೇಟಿಯಾಗಿ ಆಸ್ಪತ್ರೆಯಲ್ಲಿನ ವ್ಯವಸ್ಥೆಗಳ ಕುರಿತು ವಿವರ ಪಡೆದರು. ನಂತರ ವೈದ್ಯಾಧಿಕಾರಿಗಳ ಕೊಠಡಿಯಲ್ಲಿ ಇಲ್ಲಿಗೆ ಬರುವ ಒಳ ಹಾಗೂ ಹೊರ ರೋಗಿಗಳ ಸಂಖ್ಯೆ ಎಷ್ಟು? ಅವರಿಗೆ ತಕ್ಕಂತೆ ವೈದ್ಯರಿದ್ದಾರೆಯೇ? ಇಲ್ಲದಿದ್ದರೆ ಯಾವ ಕಾರಹಣಕ್ಕೆ ಇಲ್ಲ? ನರ್ಸ್ಗಳ ಸಂಖ್ಯೆ ಮತ್ತು ಸಿಬ್ಬಂದಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದರು.
30 ಹಾಸಿಗೆ ಆಸ್ಪತ್ರೆಯನ್ನು ನೂರು ಹಾಸಿಗೆಗೇರಿಸಿ ಹಲವು ವರ್ಷಗಳೇ ಕಳೆದಿವೆ. ಆದರೆ ಇದುವರೆಗೂ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭವಾಗಿಲ್ಲ. ಇದರಿಂದ ಪ್ರತಿನಿತ್ಯ ಇಲ್ಲಿಗೆ ಬರುವ 500ಕ್ಕೂ ಹೆಚ್ಚಿನ ರೋಗಿಗಳನ್ನು ತಪಾಸಣೆ ಮಾಡಲು ಕಷ್ಟವಾಗುತ್ತಿದೆ ಎಂದು ವೈದ್ಯರ ತಂಡ ಆಯೋಗದ ಸದಸ್ಯರ ಗಮನಕ್ಕೆ ತಂದರು.
ರೋಗಿಗಳ ಸಂಖ್ಯೆಗೆ ತಕ್ಕಂತೆ ವೈದ್ಯರಿಲ್ಲ, ಸಿಬ್ಬಂದಿ ಇಲ್ಲ, ವೈದ್ಯರು ಇಲ್ಲೇ ತಂಗಲು ವಸತಿ ಗೃಹಗಳಿಲ್ಲದ ಕಾರಣ ನಿತ್ಯ ಬೆಂಗಳೂರಿನಿಂದ ಪ್ರಯಾಣಿಸುವಂತಾಗಿದೆ. ಶವಾಗಾರ ಶಿಥಿಲಾವಸ್ಥೆಯಲ್ಲಿದ್ದು ಶವಗಳನ್ನು ಶವ ಪರೀಕ್ಷೆ ಮಾಡಲು ಅನುಕೂಲವಿಲ್ಲ.
ಅನಾಥ ಶವಗಳನ್ನು ಇಡಲು ಕೋಲ್ಡ್ ಸ್ಟೋರೇಜ್ ವ್ಯವಸ್ಥೆ ಇಲ್ಲ, ಪ್ರತಿನಿತ್ಯ ರೈಲಿಗೆ ಸಿಕ್ಕಿ ಸಾಯುವವರ ಸಂಖ್ಯೆ ಹೆಚ್ಚಾಗಿರುವುದರಿಂದ ಆ ಶವಗಳನ್ನು ಎರಡು ದಿನಗಳು ಇಡಲು ಆಗುತ್ತಿಲ್ಲ ಎಂದು ವಿವರಿಸಿದರು. ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಆಯೋಗದ ಸದಸ್ಯೆ ಮೀರಾ ಸಕ್ಸೆನಾ, ಇಲ್ಲಿನ ಆಸ್ಪತ್ರೆಯಲ್ಲಿನ ನೂನ್ಯತೆಗಳ ಬಗ್ಗೆ ರಾಜ್ಯ ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದರು.