ಸಾಲ ತೀರಿಸಲು ಹಣಕ್ಕಾಗಿ ಬಾಲಕನ ಅಪಹರಣ: ಆರೋಪಿ ಬಂಧನ, ಉರಿಗಾಂ ಪೊಲೀಸರ ಕಾರ್ಯಾಚರಣೆ
ಕೆಜಿಎಫ್: ಇತ್ತೀಚೆಗೆ ನಾಲ್ಕು ವರ್ಷದ ಶಾಲಾ ಬಾಲಕನನ್ನು ಶಾಲೆಯಿಂದ ಅಪಹರಿಸಿದ್ದ ಆರೋಪಿ ತಿರುನಾಕ್ಕರಸು ಎಂಬುವನನ್ನು ಉರಿಗಾಂ ಪೊಲೀಸರು ಬಂಧಿಸಿ ನ್ಯಾಯಲಯಕ್ಕೆ ಹಾಜರುಪಡಿಸಿದ್ದಾರೆ. ಕಳೆದ 4 ರಂದು ಫೈವ್ ಲೈಟ್ಸ್ ವೃತ್ತದ ಬಳಿಯಿರುವ ಸೆಕ್ರೆಡ್ ಹಾರ್ಟ್ ಪ್ರಾಥಮಿಕ ಶಾಲೆಯ ಎಲ್ಕೆಜಿ ವಿದ್ಯಾರ್ಥಿಯನ್ನು ಬಾಯಿ, ಕೈ ಕಾಲು ಕಟ್ಟಿ ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಅಪಹರಣ ಮಾಡಿ ನಗರದ ಸರ್ಕಾರಿ ಕಾಲೇಜಿನ ಹಿಂಬಾಗದಲ್ಲಿ ಬಿಟ್ಟು ಹೋಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉರಿಗಾಂ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಪವನ್ಕುಮಾರ್ ನೇತೃತ್ವದಲ್ಲಿ ಆರೋಪಿಯ ಪತ್ತೆಯ ಕಾರ್ಯಾಚರಣೆ ಕೈಗೊಂಡಿದ್ದರು. ಗೈತಂನಗರದ ನಿವಾಸಿ ಹಾಗೂ ಬೆಮೆಲ್ ಕಾರ್ಖಾನೆಯ ನೌಕರನಾದ ತಿರುನಾಕ್ಕರಸು ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಆರ್ಥಿಕವಾಗಿ ತೀರಾ ಸಂಕಷ್ಟಕ್ಕೆ ಸಿಲುಕಿದ್ದು ಲಕ್ಷಾಂತರ ರುಪಾಯಿ ಸಾಲವನ್ನು ಮಾಡಿದ್ದ ಕಾರಣದಿಂದ ಅದನ್ನು ತೀರಿಸಲು ತಾನು ಕೆಲಸ ಮಾಡುತ್ತಿದ್ದ ಬೆಮೆಲ್ ಕಾರ್ಖಾನೆಯ ಫ್ರಾಭಿಕೇಷನ್ ವಿಭಾಗದಲ್ಲಿ ಹಿರಿಯ ಅಧಿಕಾರಿ ಕಾಮರಾಜ್ ಅವರ ಮಗನನ್ನು ಅಪಹರಣ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾಗಿ ಡಿವೈಎಸ್ಪಿ ಎ.ಕೆ.ವಿವೇಕಾನಂದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕಾರ್ಯಾಚರಣೆಯಲ್ಲಿ ಸಿಬ್ಬಂದಿ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಬಕಾಷ್ ಮತ್ತು ಸುನಿಲ್ ಪಾಲ್ಗೊಂಡಿದ್ದರು. ಬಾಲಕನನ್ನು ಚೀಲದಲ್ಲಿ ಹಾಕಿಕೊಂಡು ನಗರದ ತನ್ನ ಅಕ್ಕನ ಮನೆಯಲ್ಲಿ ಕೂಡಿ ಹಾಕಿ ಮಗುವಿನ ತಂದೆ ಕಾಮರಾಜ್ ಅವರಿಂದ ಹಣವನ್ನು ವಸೂಲು ಮಾಡಲು ಆರೋಪಿ ಸಂಚು ರೂಪಿಸಿದ್ದನು. ಆದರೆ ಆರೋಪಿಯ ಅಕ್ಕ ಮತ್ತು ಭಾವ ಇಬ್ಬರು ಗಾಮೆಂರ್ಟ್ಸ್ ಕೆಲಸಕ್ಕೆ ಹೋಗಿದ್ದರಿಂದ ಮನೆಯ ಬೀಗದ ಕೀ ಈತನ ಬಳಿ ಇತ್ತು. ಬಾಲಕನನ್ನು ಅಪಹರಿಸಿಕೊಂಡು ಬಂದ ಅವಸರದಲ್ಲಿ ಮನೆಯ ಅಕ್ಕನ ಮನೆಯ ಬೀಗವನ್ನು ತನ್ನ ಮನೆಯಲ್ಲಿಯೇ ಮರೆತು ಬಿಟ್ಟು ಬಂದಿದ್ದನು. ಮಗುವಿದ್ದ ಚೀಲವನ್ನು ಕಾಂಪೌಂಡ್ನಲ್ಲಿ ಇಟ್ಟು ಮನೆಗೆ ಹೋಗಿ ಕಿಲಿ ಕೈ ತರುವಷ್ಟರಲ್ಲಿ ಮಗುವು ಉಸಿರಾಟದಿಂದ ಒದ್ದಾಡುತ್ತಿದ್ದ ಕೇಳಿಸಿಕೊಂಡು ರಾಬಿನ್ಸನ್ ಎಂಬ ಯುವಕ ಚೀಲ ಬಿಚ್ಚಿ ನೋಡಿದಾಗ ಮಗುವಿರುವುದು ಪತ್ತೆಯಾಗಿತ್ತು. ಆಗ ಸ್ಥಳಕ್ಕೆ ಆಗಮಿಸಿ ಆರೋಪಿ ಮಗು ಪರಿಚಯ ಇರುವಂತೆ ನಟಿಸಿ ಮಗುವನ್ನು ಪೋಷಕರಿಗೆ ಒಪ್ಪಿಸುವುದಾಗಿ ಹೇಳಿ ಕರೆದೊಯ್ಯಲು ಮುಂದಾದಾಗ ಸಾರ್ವಜನಿಕರು ಆತನಿಗೆ ಮಗುವನ್ನು ನಿಡಲು ನಿರಾಕರಿಸಿದ್ದರು. ಇದರಿಂದಾಗಿ ಆತ ಸ್ಥಳದಿಂದ ಕಾಲ್ಕಿತ್ತಿದ್ದನು. ಆರೋಪಿಯ ಸುಳಿವು ಅರಿತ ಪೊಲೀಸರು ಆತನನ್ನು ಬಂಧಿಸಿದ್ದಾರೆ.