ಕಿರಿಕ್ ಕೃಷ್ಣಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ
ಕೋಲಾರ: ಮದ್ಯ ಮಾರಾಟಗಾರರಿಗೆ ಕಿರಕುಳ ನೀಡುತ್ತಿರುವ ಪ್ರಜಾ ವಿನೋಚನಾ ಚಳವಳಿಯ ಮುಖಂಡ ಕೃಷ್ಣಪ್ಪ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ತಾಲೂಕು ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು.
ಇತ್ತೀಚೆಗೆ ನಡೆದ ಯಲ್ಲಮ್ಮ ದೇವಿ ಕರಗ ಮಹೋತ್ಸವಕ್ಕೆ ತಾವು ಕೇಳಿದಷ್ಟು ಹಣ ನೀಡಲಿಲ್ಲವೆಂಬ ಕಾರಣಕ್ಕೆ ಕೃಷ್ಣಪ್ಪ ಇಲ್ಲಸಲ್ಲದ ದೂರುಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ನೀಡಿ ಕಿರಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು.
ವ್ಯಾಪಾರಸ್ಥರನ್ನು ಬೆದರಿಸಿ ಹಣ ಕೇಳುವುದು, ಹಣ ಕೊಡದಿದ್ದಲ್ಲಿ ಅಧಿಕಾರಿಗಳಿಗೆ ವ್ಯಾಪಾರಸ್ಥರ ವಿರುದ್ಧ ಇಲ್ಲ ಸಲ್ಲದ ದೂರು ನೀಡುವುದರ ಜತೆಗೆ ಅಧಿಕಾರಿಗಳ ಮೇಲೆ ಅಟ್ರಾಸಿಟಿ ಮೊಕದ್ದಮೆ ದಾಖಲಿಸಿ ಬೆದರಿಕೆ ಹಾಕುತ್ತಿದ್ದಾರೆಂದು ಕೃಷ್ಣಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೃಷ್ಮಪ್ಪ ವಿರುದ್ಧ ದೂರು ನೀಡಿದ ನಂತರ ಮತ್ತಷ್ಟು ತೊಂದರೆ ಹೆಚ್ಚಾಗಿದೆ. ಇದರಿಂದ ವ್ಯಾಪರಸ್ಥರಲ್ಲಿ ಆತ್ಮಸ್ಥೈರ್ಯ ಕುಗ್ಗಿ ಮುಂದಿನ ದಿನಗಳಲ್ಲಿ ವ್ಯಾಪಾರ ಮಾಡುವುದು ತುಂಬಾ ಕಷ್ಟಕರವಾಗುತ್ತದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ. ತಾಲೂಕು ಮದ್ಯ ಮಾರಾಟಗಾರರ ಕ್ಷೇಮಾಭಿವೃದ್ಧಿ ಸಂಘದ ಹರೀಶ್, ಸೋಮಶೇಖರ್, ಚಲಪತಿ, ಮಂಜುನಾಥ್, ಅಶ್ವತ್ಥ, ಗೌವರ್ಧನ್ ಇದ್ದರು.