ಕುರುಡುಮಲೆ ಮಂಜುನಾಥ್ ವಿರುದ್ಧದ ಅವಿಶ್ವಾಸಕ್ಕೆ ಸೋಲು
ಮುಳಬಾಗಲು: ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕುರುಡುಮಲೆ ಮಂಜುನಾಥ್ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಒಂದು ಮತದ ಕೊರತೆಯಿಂದ ಸೋಲು ಅನುಭವಿಸುವಂತಾಗಿದೆ. ಜೆಡಿಎಸ್ ಮುಖಂಡ ಕುರುಡುಮಲೆ ಮಂಜುನಾಥ್ ವಿರುದ್ಧ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಅವಿಶ್ವಾಸ ಮಂಡಿಸಿದ್ದರು. ನಿರ್ದೇಶಕರಾದ ನಲ್ಲೂರು ರಘುಪತಿರೆಡ್ಡಿ ಗೊಲ್ಲಹಳ್ಳಿ ಸತೀಶ್, ಬಂಡಹಳ್ಳಿ ಲಕ್ಷ್ಮಿನಾರಾಯಣ, ಸೊಣ್ಣಿಗೌಡ, ಅವಿಶ್ವಾಸ ನಿರ್ಣಯದ ವಿರುದ್ಧ ನಿಲುವಳಿ ಮಂಡಿಸಿದ್ದರು. ಅವಿಶ್ವಾಸ ನಿರ್ಣಯದ ಪರವಾಗಿ ಉಪಾಧ್ಯಕ್ಷ ಭಟ್ಟರಹಳ್ಳಿ ನಾರಾಯಣಪ್ಪ, ಆವಣೆ ಕೃಷ್ಣಪ್ಪ, ಯಡಹಳ್ಳಿ ಜಯೇಗೌಡ, ಮಂಗಮ್ಮ ಸುಬ್ರಮಣೆ, ನಂದಕುಮಾರ್, ಟೆ.ವಿ. ವೆಂಕಟರವಣಪ್ಪ, ರಾಮಪ್ಪ, ಉತ್ತನೂರು ಗೋವಿಂದಪ್ಪ ಸುಬ್ರಮಣಿ, ಪ್ರಕಾಶ್ ಮತ ಚಲಾಯಿಸಿದರು. ಆದರೆ ಕೃಷಿ ಉತ್ಪನ್ನ ಮಾರುಕಟ್ಟಿ ಸಮಿತಿ ಸಹಾಯಕ ನಿರ್ದೇಶಕರಿಗೆ ಮತದಾನದ ಹಕ್ಕಿಲ್ಲ ಎಂಬ ಹಿನ್ನೆಲೆಯಲ್ಲಿ ಅವಿಶ್ವಾಸ ನಿರ್ಣಯದ ಪರವಾಗಿ 10 ಹಾಗೂ ಅವಿಶ್ವಾಸ ನಿರ್ಣಯದ ವಿರುದ್ಧ ಒಂದು ಮತ ಬಂದ ಕಾರಣ ಒಂದು ಮತದ ಅಂತರದಲ್ಲಿ ಅಧ್ಯಕ್ಷರ ಪದಚ್ಯುತಿಗೆ ಮೂರನೇ ಎರಡು ಬಹುಮತ ದೊರೆಯದ ಕಾರಣ ಸೋಲಾಗಿದೆ. ಚುನಾವಣಾಧಿಕಾರಿಯಾಗಿ ಸಮಿತಿ ಕಾರ್ಯದರ್ಶಿ ಕೃಷ್ಣನ್ ಭಾಗವಹಿಸಿದ್ದರು.