ಗುರುಪೂಜಾ ಕಾರ್ಯಕ್ರಮಕ್ಕೆ ಚಾಲನೆ
ಚಿಂತಾಮಣಿ: ಕೈವಾರದ ಶ್ರೀ ಯೋಗಿ ನಾರೇಯಣ ಮಠದಲ್ಲಿ ಗುರುಪೌರ್ಣಿಮೆ ಪ್ರಯುಕ್ತ ನಡೆಯುತ್ತಿರುವ ಗುರುಪೂಜಾ ಕಾರ್ಯಕ್ರಮಗಳು ಸದ್ಗುರುಗಳ ಪೂಜೆಯೊಂದಿಗೆ ಆರಂಭವಾಯಿತು. ಮೂರು ದಿನಗಳ ಕಾಲ ನಡೆಯುವ ಗುರುಪೂಜಾ ಸಂಗೀತೋತ್ಸವಕ್ಕೆ ಧರ್ಮಾಧಿಕಾರಿ ಎಂ.ಆರ್. ಜಯರಾಮ್ ಚಾಲನೆ ನೀಡಿದರು. ಪಲ್ಲಕ್ಕಿಯಲ್ಲಿ ಸದ್ಗುರು ತಾತಯ್ಯನವರನ್ನು ದೇವಾಲಯದಿಂದ ಮಂಗಳವಾದ್ಯಗಳ ಸಮೇತ ಸಂಗೀತ ಸಭಾಂಗಣಕ್ಕೆ ತರಲಾಯಿತು. ಧರ್ಮಾಧಿಕಾರಿ ಡಾ.ಎಂ.ಆರ್. ಜಯರಾಮ್ ನೇತೃತ್ವದಲ್ಲಿ ಸಂಕೀರ್ತನೆ ಸಮರ್ಪಿಸಲಾಯಿತು. ನಂತರ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ವಿದ್ವಾಂಸರಿಂದ ಸಂಗೀತ ಸಮರ್ಪಣೆಯಾಯಿತು. ಶ್ರೀ ಯೋಗಿನಾರೇಯಣ ಸಭಾಂಗಣದಲ್ಲಿ ಸಂಗೀತ ಕಚೇರಿಗಳನ್ನು ವ್ಯವಸ್ಥೆ ಮಾಡಲಾಗಿದೆ.