ಜಮೀನು ನೋಂದಣಿಗೆ 3000 ಲಂಚ ಸ್ವೀಕರಿಸುತ್ತಿದ್ದಾಗ ಲೋಕಾ ಬಲೆಗೆ ಬಿದ್ದ ಉಪ ನೋಂದಣಾಧಿಕಾರಿ
ಬಾಗೇಪಲ್ಲಿ: ತಂಗಿಯ ಹೆಸರಿನಲ್ಲಿರುವ ಜಮೀನನ್ನು ದಾನ ರೂಪದಲ್ಲಿ ಅಣ್ಣನ ಹೆಸರಿಗೆ ನೋಂದಣಿ ಮಾಡಿಸಲು ರು. 3 ಸಾವಿರ ಲಂಚ ಪಡೆಯುತ್ತಿದ್ದ ಉಪ ನೋಂದಣಾಧಿಕಾರಿ ಲೋಕಾಯುಕ್ತ ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ಈಗ ಉಪ ನೋಂದಣಾಧಿಕಾರಿ ಸಿ.ಅಂಜಲಿ ಅವರನ್ನು ಚಿಕ್ಕಬಳ್ಳಾಪುರ ಲೋಕಾಯುಕ್ತ ಡಿವೈಎಸ್ಪಿ ಬೋಪಯ್ಯ ನೇತೃತ್ವದ ಅಧಿಕಾರಿಗಳ ತಂಡ ಲಂಚ ಸ್ವೀಕರಿಸಿದ ಆರೋಪದ ಮೇಲೆ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ. ಸಿ. ಅಂಜಲಿ ಅವರು ನಾಲ್ಕು ದಿನಗಳ ಹಿಂದೆ ಉಪ ನೋಂದಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸ್ಥಳೀಯ ಲೋಕೇಶ್ ಅವರಿಗೆ ಸಂಬಂಧಪಟ್ಟ ಸರ್ವೆ ನಂ 515 ಜಮೀನನ್ನು ರಿಯಲ್ ಎಸ್ಟೇಟ್ ಮಾಲೀಕರಿಗೆ ಮಾರಾಟ ಮಾಡಿದ ಒಪ್ಪಂದದ ಪತ್ರ ಬರೆದುಕೊಟ್ಟಿದ್ದರು. ಈ ಸ್ವತ್ತಿನ ದಾಖಲಾತಿಗಳ ವಿಚಾರದಲ್ಲಿ ಉಪನೋಂದಣಾಧಿಕಾರಿ ಹಾಗೂ ಪತ್ರ ಬರಹಗಾರ ಶಿವಪ್ಪ ಎಂಬುವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ಸಂಬಂಧ ಉಪನೋಂದಣಾಧಿಕಾರಿ ಸೂಕ್ತ ರೀತಿಯ ದಾಖಲೆಗಳನ್ನು ತಂದು ಕಾನೂನಿನ ರೀತಿಯಲ್ಲಿ ನೋಂದಣಿ ಮಾಡಿಸಿಕೊಳ್ಳುವಂತೆ ತಿಳಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕುಪಿತಗೊಂಡ ಪತ್ರಬರಹಗಾರ ಶಿವಪ್ಪ ತನ್ನ ತಂಗಿಯ ಹೆಸರಿನಲ್ಲಿರುವ ಕಸಬಾ ಹೋಬಳಿ ಕೊಂಡಂವಾರಿಪಲ್ಲಿಯ ಸರ್ವೆ ನಂ. 54/11ರಲ್ಲಿ ಒಂದೂವರೆ ಗುಂಟೆ ಜಮೀನನ್ನು ದಾನದ ರೂಪದಲ್ಲಿ ನೋಂದಣಿ ಮಾಡಿಸಲು ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋಗಿದ್ದರು. ಉಪ ನೋಂದಣಾಧಿಕಾರಿಗಳು 3 ಸಾವಿರ ರು. ಲಂಚ ಕೇಳಿದರೆಂದು ಎನ್ನಲಾಗಿದೆ. ಈ ಬಗ್ಗೆ ಶಿವಪ್ಪ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಡಿವೈಎಸ್ಪಿ ಸಿ.ಎನ್ .ಬೋಪಯ್ಯ ಕಚೇರಿ ಮೇಲೆ ದಾಳಿ ಮಾಡಿದ್ದು ಉಪ ನೋಂದಣಾಧಿಕಾರಿಗಳನ್ನು ಲಂಚದ ಹಣ ಸಮೇತ ಬಂಧಿಸಲಾಗಿದೆ.