ಅಕ್ರಮ ನೇಮಕಾತಿ: ನೋಟಿಸ್ ಜಾರಿ
ಕೋಲಾರ: ನಿಯಮ ಉಲ್ಲಂಘನೆ ಮಾಡಿ ಕೆಲಸ ಗಿಟ್ಟಿಸಿಕೊಂಡಿದ್ದಾರೆಂದು ಆರೋಪ ಹೊತ್ತಿರುವ ಕೋಲಾರ-ಚಿಕ್ಕಬಳ್ಳಾಪುರ ಕೇಂದ್ರ ಸಹಕಾರ ಬ್ಯಾಂಕಿನ 25 ಮಂದಿಗೆ ಸರ್ಕಾರದ ಸೂಚನೆಯಂತೆ ನೋಟಿಸ್ ಜಾರಿ ಮಾಡಲಾಗಿದ್ದು, ಎಲ್ಲರಿಂದ ಉತ್ತರ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ. ಗೋವಿಂದಗೌಡ ತಿಳಿಸಿದ್ದಾರೆ. ನಗರದ ಡಿಸಿಸಿ ಬ್ಯಾಂಕ್ನಲ್ಲಿ 25 ಮಂದಿ ಅಕ್ರಮವಾಗಿ ನೇಮಕಾತಿ ಆದೇಶ ಪಡೆದು ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆಂಬ ಆರೋಪದಡಿ ಇತ್ತೀಚೆಗೆ ನ್ಯಾಯಾಲಯ ಸದರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವಜಾಕ್ಕೆ ಸೂಚಿಸಿರುವುದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಅವರು, ಈ ನೇಮಕಾತಿ ನನ್ನ ಕಾಲದಲ್ಲಿ ಆಗಿಲ್ಲ. ಕಳೆದ 18 ವರ್ಷಗಳ ಹಿಂದೆಯೇ ನೇಮಕಾತಿ ಆಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಬ್ಯಾಂಕ್ನಲ್ಲಿ ಪ್ರಸ್ತುತ ಇರುವ 43 ಸಿಬ್ಬಂದಿಯ ಪೈಕಿ 25 ಮಂದಿಯನ್ನು ವಜಾಗೊಳಿಸಿದಲ್ಲಿ ಕೇವಲ 18 ಮಂದಿ ಉಳಿಯುತ್ತಾರೆ. ಕೇಂದ್ರ ಕಚೇರಿಯಲ್ಲಿ ಕೆಲಸ ನಿರ್ವಹಿಸಲು ಕನಿಷ್ಠ 15 ಮಂದಿ ಬೇಕು. 13 ಶಾಖೆಗಳಿಗೆ 26 ಮಂದಿ ಅಗತ್ಯವಿದೆ. ಅವಿಭಜಿತ ಜಿಲ್ಲೆಯಲ್ಲಿ ಸಿಬ್ಬಂದಿ ಕೊರತೆಯಾದರೆ ರೈತರ ಪಾಡೇನು ಎಂದು ಪ್ರಶ್ನಿಸಿದರು. ಅಕ್ರಮ ನೇಮಕಾತಿ ಆರೋಪ ಹೊತ್ತಿರುವವರು ಈಗಾಗಲೇ 18ರಿಂದ 19 ವರ್ಷ ಸೇವೆ ಮುಗಿಸಿದ್ದಾರೆ. ಕೆಲವರಿಗೆ ವಯಸ್ಸಾಗಿದೆ. ಪ್ರಾರಂಭದಲ್ಲೇ ಲೋಪ ಕಂಡು ಹಿಡಿದು ಕ್ರಮ ಕೈಗೊಂಡಿದ್ದರೆ ಸಮಸ್ಯೆ ಎದುರಾಗುತ್ತಿರಲಿಲ್ಲ. ನೋಟಿಸ್ಗಳಿಗೆ ಕೆಲವರು ಉತ್ತರ ನೀಡಿದ್ದು, ನಮ್ಮ ತಪ್ಪೇನು ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಆಡಳಿತದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಮೂವರ ವಿರುದ್ಧ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಈ ಕುರಿತು ಪ್ರಸ್ತಾಪಿಸುವುದಿಲ್ಲವೆಂದರು.