ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಎಸ್ಸೆಸ್ಸೆಲ್ಸಿ ಸಮಗ್ರ ಮೌಲ್ಯಮಾನಪನಕ್ಕೆ ಸಿದ್ಧತೆ

Rashmi Kasaragodu
Updated On : 12 Jul 2014, 1:05 am

ಕೋಲಾರ: ಶಿಕ್ಷಣ ಇಲಾಖೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಳವಡಿಸಿರುವ ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿಯ ಕುರಿತು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತನ್ನ ಕಾರ್ಯಸೂಚಿಯನ್ನು ಪ್ರಕಟಿಸಿದೆ.
ಇಡೀ ವರ್ಷ ಓದಿ ಬರೆಯುವ ವಾರ್ಷಿಕ ಪರೀಕ್ಷೆ ಅಂಕ ಮತ್ತು ತೇರ್ಗಡೆಗೆ ಮಾನದಂಡವಾಗಿದ್ದನ್ನು ತಪ್ಪಿಸಿ ಇದೀಗ ಪರೀಕ್ಷೆ ಅಂಕಗಳ ಜತೆಗೆ ಆಂತರಿಕ ಅಂಕಗಳನ್ನು ಅಂಕಪಟ್ಟಿಯಲ್ಲಿ ನಮೂದಿಸುವ ಮೂಲಕ 4 ಕಿರು ಪರೀಕ್ಷೆಗಳನ್ನು ನಡೆಸಿ ಗುಣಾತ್ಮಕ ಮೌಲ್ಯಮಾಪನದ ಆಧಾರದ ಮೇಲೆ ಫಲಿತಾಂಶ ನಿರ್ಧರಿಸುವ ವಿಧಾನ ಜಾರಿಗೊಳಿಸಿದೆ.
ನಿರಂತರ ಹಾಗೂ ಸಮಗ್ರ ಮೌಲ್ಯಮಾಪನ ಪದ್ಧತಿ (ಸಿಸಿಇ) ಕುರಿತಂತೆ ಶಿಕ್ಷಕರ ಗೊಂದಲವನ್ನು ಪರಿಹರಿಸುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರತಿ ಶಾಲೆಗೂ ತೆರಳಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಪ್ರಥಮ ಭಾಷೆ 100 ಅಂಕಗಳಿಗೆ ಬಾಹ್ಯ ಪರೀಕ್ಷೆ ಹಾಗೂ 25 ಅಂಕಗಳಿಗೆ ಗುಣಾತ್ಮಕ ಮೌಲ್ಯಮಾಪನದ ಮೂಲಕ ಆಂತರಿಕ ಅಂಕಗಳಾಗಿ ಪರಿಗಣಿಸಲಾಗುತ್ತದೆ. ಉಳಿದಂತೆ ದ್ವಿತೀಯ ಭಾಷೆ, ತೃತೀಯ ಭಾಷೆ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ತಲಾ 80 ಅಂಕಗಳಿಗೆ ಬಾಹ್ಯ ಪರೀಕ್ಷೆ ನಡೆಯಲಿದ್ದು, ಉಳಿದ ತಲಾ 20 ಅಂಕಗಳನ್ನು ಇಡೀ ವರ್ಷದಲ್ಲಿ ನಡೆಸುವ 4 ಕಿರುಪರೀಕ್ಷೆಗಳ ಅಂಕಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ ಮತ್ತು ಈ ಅಂಕಗಳು ಅಂಕಪಟ್ಟಿಯಲ್ಲಿ ದಾಖಲಾಗಲಿದೆ ಎಂದು ತಿಳಿಸಿದ್ದಾರೆ.
ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಸಿಸಿಇ ಬಗ್ಗೆ ಸಮಗ್ರ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ತರಬೇತಿ ಅವಧಿಯಲ್ಲಿ ಡಿಡಿಪಿಐ, ಶಿಕ್ಷಣಾಧಿಕಾರಿಗಳು, ವಿಷಯ ಪರೀಕ್ಷಕರಿಗೂ ತಿಳಿಸಿ ಅವರಿಂದಲೂ ಮಾರ್ಗದರ್ಶನ ಕೊಡಿಸಬೇಕು ಎಂದು ಸೂಚಿಸಿದ್ದಾರೆ.
ಖಾಸಗಿ ಅಭ್ಯರ್ಥಿಗಳಿಗೆ ಹಿಂದಿನಂತೆ 625 ವಿಷಯಗಳಿಗಷ್ಟೇ ಬಾಹ್ಯ ಪರೀಕ್ಷೆ ನಡೆಯಲಿದ್ದು, ಆಂತರಿಕ ಅಂಕಗಳು ಇರುವುದಿಲ್ಲ. ಇದೀಗ ಇಡೀ ವರ್ಷ ನಿರಂತರ ಮೌಲ್ಯಮಾಪನ ನಡೆಯುವುದರಿಂದ ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಯ ಬಗ್ಗೆ ಗಮನವಿಟ್ಟಿರಬೇಕು, ಶಾಲೆಗೆ ಭೇಟಿ ನೀಡಿ ಪ್ರಗತಿಯ ಮಾಹಿತಿ ಪಡೆದುಕೊಳ್ಳಬೇಕು ಎಂದು ಡಿಡಿಪಿಐ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement