ಜನಸಂಖ್ಯೆ ಹೆಚ್ಚಳ ಅಭಿವೃದ್ಧಿಗೆ ಮಾರಕ: ಡಾ.ಕಮಲಾಕರ್ ಅಭಿಪ್ರಾಯ
ಗುಡಿಬಂಡೆ: ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಅಭಿವೃದ್ಧಿ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಪಪಂ ಅಧ್ಯಕ್ಷ ರಿಯಾಜ್ ಪಾಷ ಅಭಿಪ್ರಾಯ ಪಟ್ಟರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿ, ಜನಸಂಖ್ಯಾ ಸ್ಪೋಟದಿಂದ ದೇಶ ಸಂಪನ್ಮೂಲ ಕೊರತೆ ಎದುರಿಸುತ್ತಿದೆ. ಒಂದು ದೇಶದ ಜನತೆ ಪ್ರಗತಿ ಸಾಧಿಸಬೇಕಾದರೆ ಕುಟುಂಬ ನಿಯಂತ್ರಣ ಪಾಲನೆ ಅಗತ್ಯ ಎಂದರು. ತಾಲೂಕು ಆರೋಗ್ಯಾಧಿಕಾರಿ ಮಹಿಮಾ ಮಾತನಾಡಿ, ಪ್ರಗತಿಗೆ ಮಾರಕವಾಗಿರುವ ಜನಸಂಖ್ಯೆ ನಿಯಂತ್ರಿಸಲು ಸರ್ಕಾರ ಹಾಗೂ ಇಲಾಖೆ ಹಲವಾರು ಕ್ರಮ ಕೈಗೊಂಡಿದೆ ಎಂದರು. ತಹಸೀಲ್ದಾರ್ ನಂಜಪ್ಪ, ಆರೋಗ್ಯಾಧಿಕಾರಿ ನರಸಿಂಹ ಮೂರ್ತಿ, ಪಪಂ ಉಪಾಧ್ಯಕ್ಷ ರಾಜಣ್ಣ, ಸಿಡಿಪಿಒ ಸಿದ್ದಲಿಂಗಪ್ಪ ಇದ್ದರು.