ಡಿಸಿ ವರ್ಗಕ್ಕೆ ಆಗ್ರಹ
ಚಿಕ್ಕಬಳ್ಳಾಪುರ: ದಲಿತರ ಸಮಸ್ಯೆಗಳನ್ನು ಬಗೆಹರಿಸಲು ವಿಫಲರಾಗಿರುವ ಜಿಲ್ಲಾಧಿಕಾರಿಯನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿ ದಲಿತ ಸಂಘಟನೆಗಳ ಸಮನ್ವಯ ಸಮಿತಿ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಡಾ.ಅಂಬೇಡ್ಕರ್ ವಸತಿ ನಿಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕಾರ್ಯಕರ್ತರು ಎಂ.ಜಿ.ರಸ್ತೆ ಮತ್ತು ಬಿ.ಬಿ.ರಸ್ತೆ ಮೂಲಕ ಹೊರ ವಲಯದಲ್ಲಿರುವ ಜಿಲ್ಲಾ ರಕ್ಷಣಾಧಿಕಾರಿಗಳ ಕಚೇರಿಗೆ ತೆರಳಿದರು. ನಂತರ ರಾಜ್ಯ ಸರ್ರ್ಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿದರು. ಮಾದಿಗ ದಂಡೋರ, ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ), ಸಮತಾ ಸೈನಿಕ ದಳ, ದಸಂಸ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಜೊತೆಗೂಢಿದ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಾವು ಜೋರಾಗಿತ್ತು. ಈ ವೇಳೆ ಮಾತನಾಡಿದ ಕದಸಂಸ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್, ದಲಿತ ಸಂಘಟನೆಗಳ ನಡುವೆ ಬಿರುಕು ಉಂಟು ಮಾಡಿ ಹೋರಾಟಗಳನ್ನು ಹತ್ತಿಕ್ಕುವ, ಹೋರಾಟಗಾರರನ್ನು ಜೈಲಿಗೆ ಕಳುಹಿಸುವಂತಹ ಧೋರಣೆಯನ್ನು ಜಿಲ್ಲಾಧಿಕಾರಿ ಕೈಬಿಡಬೇಕು. ಜಿಲ್ಲಾಧಿಕಾರಿ ಆರ್.ವಿಶಾಲ್ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದಲ್ಲಿ ಸರ್ಕಾರ ಗಂಭೀರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೆ.ಸಿ.ರಾಜಾಕಾಂತ್, ವೆಂಕಟಸ್ವಾಮಿ, ಶಂಕರಪ್ಪ ಮಾತನಾಡಿದರು. ವೆಂಕಟಗಿರಿ, ಬಿ.ವಿ.ಆನಂದ್ , ವೇಣು, ಮುನಿವೆಂಕಟಸ್ವಾಮಿ, ಗಂಗಾಧರ್ , ಭಾಗ್ಯಮ್ಮ ಮುಂತಾದವರು ಭಾಗವಹಿಸಿದ್ದರು.