ಪ್ರತಿ ಗಂಟೆಗೆ 2 ಮಗು ಜನನ
ಚಿಕ್ಕಬಳ್ಳಾಪುರ: ಜಗತ್ತಿನಲ್ಲಿ ಕೋಟ್ಯಂತರ ಜನರು ಆಹಾರವಿಲ್ಲದೇ ಅರೆ ಹೊಟ್ಟೆಯಲ್ಲಿ ಮಲಗುತ್ತಿದ್ದಾರೆ. ಹಲವರು ಹಸಿವಿನಿಂದ ಸಾಯುತ್ತಿದ್ದಾರೆ ಎಂದು ಸಂಪನ್ಮೂಲ ವ್ಯಕ್ತಿ ಕೋಡಿರಂಗಪ್ಪ ವಿಷಾದ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಆಶ್ರಯದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಗತ್ತಿನ ಈಗಿನ ಜನಸಂಖ್ಯೆಯನ್ನು ಸಲುಹಲು ಸಾಧ್ಯವಾಗುತ್ತಿಲ್ಲ. ಮುಂದಿನ 250 ವರ್ಷಗಳಲ್ಲಿ ಬಳಸಿಕೊಳ್ಳಬೇಕಿದ್ದ ಸಂಪನ್ಮೂಲಗಳನ್ನು ಈಗಾಗಲೇ ಬಳಸಿಕೊಂಡಿದ್ದೇವೆ. ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತಿದೆ. ಬಡತನ, ನಿರುದ್ಯೋಗ, ಪೌಷ್ಠಿಕ ಆಹಾರದ ಕೊರತೆ ಹೆಚ್ಚಾಗುತ್ತಿದ್ದು ಇದಕ್ಕೆ ಜನಸಂಖ್ಯಾ ಹೆಚ್ಚಳವೇ ಮೂಲ ಕಾರಣವಾಗಿದೆ ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಸಂತಾನೋತ್ಪತ್ತಿ ಹಾಗೂ ಮಕ್ಕಳ ಆರೋಗ್ಯ ಅಧಿಕಾರಿ ಸುರೇಂದ್ರನಾಥ ಮಾತನಾಡಿ, ಜಿಲ್ಲೆಯಲ್ಲಿ ಪ್ರತಿ ಗಂಟೆಗೆ 2 ಮಕ್ಕಳು ಜನಿಸುತ್ತಿವೆ. ಮದುವೆಯಾಗುವ ಮಹಿಳೆಯರ ಸರಾಸರಿ ವಯಸ್ಸು ಶೇ. 19.8 ರಷ್ಟಿದೆ. ಪುರುಷರ ಸರಾಸರಿ ವಯಸ್ಸು 28.8 ರಷ್ಟಿದೆ. ದೇಶದ ಜನಸಂಖ್ಯೆ ಅಂಕಿ ಅಂಶಗಳಿಗೆ ಹೋಲಿಸಿದರೆ, ಜಿಲ್ಲೆಯ ಅಂಕಿ ಅಂಶಗಳು ಜನಸಂಖ್ಯೆ ನಿಯಂತ್ರಣಕ್ಕೆ ಪೂರಕವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗಸ್ವಾಮಿ, ಡಾ.ಮಂಜುಳಾ ಮುಂತಾದವರು ಪಾಲ್ಗೊಂಡಿದ್ದರು.