ಬ್ಲೇಡ್ ಕಂಪನಿಗಳ ಕಡಿವಾಣಕ್ಕೆ ಆಗ್ರಹ
ಕೋಲಾರ: ಜಿಲ್ಲಾದ್ಯಂತ ರೈತ ಕೂಲಿ ಕಾರ್ಮಿಕರ ರಕ್ತ ಹೀರುತ್ತಿರುವ ಬ್ಲೇಡ್ ಕಂಪನಿಗಳಿಗೆ ಕಡಿವಾಣ ಹಾಕಲು ಜಿಲ್ಲಾಡಳಿತಕ್ಕೆ ರೈತ ಸಂಘ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ನಾರಾಯಣ ಗೌಡ, ಕೋಲಾರ ಜಿಲ್ಲಾದ್ಯಂತ ರೈತ ಕೂಲಿ ಕಾರ್ಮಿಕರನ್ನು ಒಂದಲ್ಲಾ ಒಂದು ರೀತಿ ಬ್ಲೇಡ್ ಕಂಪನಿಗಳು ರಕ್ತ ಹೀರುತ್ತಿವೆ. ನಾಯಿ ಕೊಡೆಗಳಂತೆ ಇವು ತಲೆ ಎತ್ತಿದ್ದರೂ, ಇವುಗಳ ಅರಿವಿಲ್ಲದ ಜಿಲ್ಲಾಡಳಿತ ಮೌನಕ್ಕೆ ಜಾರಿರುವುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಎಡೆ ಮಾಡಿದೆ ಎಂದಿದ್ದಾರೆ.
ನಗರದಲ್ಲಿ ತಲೆ ಎತ್ತಿರುವ ಸ್ವಯಂಕೃಷಿ, ಅಕ್ಷಯ ಗೋಲ್ಡ್, ಮೈತ್ರಿ, ಗ್ರೀನ್ಬರ್ಡ್ಸ್ ಇನ್ನಿತರ ಹೊರ ರಾಜ್ಯದ ಕಂಪನಿಗಳು ಜಿಲ್ಲಾದ್ಯಂತ ಕಚೇರಿಗಳನ್ನು ತೆರೆದು ಅದರಲ್ಲಿ ಏಜೆಂಟರನ್ನು ನೇಮಿಸಿ, ರೈತ ಕೂಲಿ ಕಾರ್ಮಿಕರಿಗೆ ಬಳಿ ಆಸೆ ತೋರಿಸಿ, ಸಾವಿರಾರು ರುಪಾಯಿ ಠೇವಣಿ ಸಂಗ್ರಹಿಸಿ ಗ್ರಾಹಕರಿಗೆ ಯಾವುದೇ ಅನುಕೂಲಗಳು ಕಲ್ಪಿಸದೆ ಪಂಗನಾಮ ಹಾಕುತ್ತಿವೆ ಎಂದು ದೂರಿದ್ದಾರೆ.
ಗ್ರಾಹಕರಿಗೆ ಆಗಿರುವ ಅನ್ಯಾಯಗಳ ಕುರಿತು ವಿಚಾರಿಸಿದರೆ ಇಲ್ಲಿನ ಅಧಿಕಾರಿಗಳು ನಾವು ಠೇವಣಿ ಸಂಗ್ರಹಣೆದಾರರು ಮಾತ್ರ, ಏನಾದರೂ ತೊಂದರೆ ಆಗಿದ್ದರೆ ಕಂಪನಿಯ ಕಾನೂನು ಪಾಲಕರನ್ನು ವಿಚಾರಿಸಿ ಎಂದು ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸಾಲ ಮಾಡಿ ಠೇವಣಿ ಪಾವತಿಸಿರುವ ಜನರಿಗೆ ಅನ್ಯಾಯ ಮಾಡಿರುವವರ ವಿರುದ್ಧ ಕ್ರಮ ಕೈಗೊಂಡು ಪಾವತಿಸಿರುವ ಹಣವನ್ನು ವಾಪಸ್ ಮಾಡಿಸುವಂತೆ ಒತ್ತಾಯಿಸಿದ್ದಾರೆ.
ಬ್ಲೇಡ್ ಕಂಪನಿಗಳ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿ ಸಂಬಂಧಪಟ್ಟ ಆಡಳಿತ ಮಂಡಳಿ ಹಾಗೂ ಏಜೆಂಟರ ವಿರುದ್ಧ ಕ್ರಿಮಿನಲ್ ಮೊಕದಮ್ಮೆ ದಾಖಲಿಸಿ, ಜಿಲ್ಲಾ ಆಡಳಿತ ಮುಂದಾಗಬೇಕೆಂದು ತಿಳಿಸಿದ್ದಾರೆ.