ಮಳೆ ಕೊರತೆ: ಬಿತ್ತನೆ ಕುಂಠಿತ
ಚಿಕ್ಕಬಳ್ಳಾಪುರ: ಇಲ್ಲಿನ ಜಿಪಂ ಸಭಾಗಂಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಜಿಲ್ಲೆಯಲ್ಲುಂಟಾಗಿರುವ ಮಳೆ ಕೊರತೆ, ಬಿತ್ತನ ಕಾರ್ಯ ಹಿನ್ನಡೆ ಬಗ್ಗೆ ಚರ್ಚಿಸಲಾಯಿತು.
ಜಿ.ಪಂ.ಅಧ್ಯಕ್ಷ ಕೆ.ಎನ್ .ಕೇಶವರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೃಷಿ ಷಿ, ಪಶುಸಂಗೋಪನಾ, ತೋಟಗಾರಿಕೆ, ಜಲಾನಯನ, ಲೋಕೋಪಯೋಗಿ, ಕೈ ಮಗ್ಗ ಮತ್ತು ಜವಳಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯ ಸಮಾಲೋಚನೆ ನಡೆಯಿತು.
ಇತ್ತೀಚೆಗೆ ಜಿಲ್ಲೆಯಲ್ಲಿ ಮಳೆ ಬೀಳುತ್ತಿದೆ. ಈ ಹಿಂದಿನ ತಿಂಗಳುಗಳಲ್ಲಿ ಸಮರ್ಪಕವಾಗಿ ಮಳೆಯಾಗದೇ ರೈತರಲ್ಲಿ ಆತಂಕವನ್ನುಂಟು ಮಾಡಿತ್ತು. ಈಗ ಮಳೆ ಬೀಳುತ್ತಿರುವುದು ಸ್ವಲ್ಪ ಮಟ್ಟಿಗೆ ಆತಂಕ ದೂರ ಮಾಡಿದ್ದು, ಬಿತ್ತನೆ ಕಾರ್ಯ ಚುರುಕಾಗಿ ನಡೆಯುತ್ತಿರುವ ವಾತಾವರಣ ಕಂಡು ಬರುತ್ತಿದೆ. ಪ್ರಸ್ತುತ ಶೇ.25 ರಷ್ಟು ಮಳೆ ಕೊರತೆ ಸಮಸ್ಯೆಗೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಕೃಷಿ ಇಲಾಖೆ ಅಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.
ಕೃಷಿ ಇಲಾಖೆಯು ಯಾವುದೇ ರೀತಿಯ ದೂರುಗಳು ಬಾರದಂತೆ ನೋಡಿಕೊಂಡು ರೈತರಿಗೆ ಅನುಕೂಲ ಮಾಡಿಕೊಡಬೇಕು. ಇದಕ್ಕೆ ಅವರಿಗೆ ಸೂಕ್ತ ಮಾರ್ಗದರ್ಶನ, ಸಲಹೆ ನೀಡುವಂತಹುದು, ರಸಗೊಬ್ಬರ ಮತ್ತು ಬಿತ್ತನೆ ಬೀಜ ಕೊರತೆ ಎದುರಾಗದಂತೆ ನೋಡಿಕೊಳ್ಳಬೇಕೆಂದು ಜಿ.ಪಂ.ಅಧ್ಯಕ್ಷರು ಸೂಚಿಸಿದರು.
ಗುರಿ ನಿಗದಿ: ಕೈಮಗ್ಗ ಹಾಗೂ ಜವಳಿ ಇಲಾಖೆಗೆ ಸಂಬಂಧಿಸಿದಂತೆ 500 ಜನಕ್ಕೆ ಕ್ರೆಡಿಟ್ ಕಾರ್ಡ್ ಸೌಲಭ್ಯದ ಗುರಿ ನಿಗದಿಪಡಿಸಿದ್ದು, ಈ ಪೈಕಿ 245 ಜನರಿಗೆ ಬ್ಯಾಂಕ್ ಗಳಿಂದ ಸಾಲವನ್ನು ನೀಡಲಾಗಿದೆಯೆಂದು ಇಲಾಖೆಯ ಅಧಿಕಾರಿ ತಿಳಿಸಿದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಉಪಾಧ್ಯಕ್ಷೆ ವೀಣಾ ಗಂಗುಲಪ್ಪ, ಕೇವಲ ಅರ್ಧದಷ್ಟು ರೈತರಿಗೆ ಮಾತ್ರ ಸಾಲವನ್ನು ದೊರಕಿಸಿಕೊಟ್ಟರೆ ಸಾಲದು. ಇದರಿಂದ ಉಳಿದವರು ವಂಚಿತರಾಗಬೇಕಾಗುತ್ತದೆ. ಇದನ್ನು ತಪ್ಪಿಸಲು ಲೀಡ್ ಬ್ಯಾಂಕಿನೊಂದಿಗೆ ಸಮನ್ವಯ ಸಾಧಿಸಿ ಬಾಕಿ ಉಳಿದಿರುವ ರೈತರಿಗೆ ಸಾಲವನ್ನು ಮಂಜೂರು ಮಾಡಿಸಿಕೊಡಬೇಕೆಂದು ತಿಳಿಸಿದರು.
ಪಠ್ಯ, ಸಮವಸ್ತ್ರ ವಿತರಣೆ: ಈಗಾಗಲೇ ಪಠ್ಯಪುಸ್ತಕಗಳು ಹಾಗೂ ಸಮವಸ್ತ್ರಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಆದರೆ, ಶಾಲಾ ಬ್ಯಾಗುಗಳು ಬಂದಿಲ್ಲ. ಇದನ್ನು ತರಿಸಿಕೊಡಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನೂ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಲು 250 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಇದಕ್ಕಾಗಿ ಅರ್ಜಿ ಆಹ್ವಾನಿಸಿದ್ದು, ಆಯ್ಕೆಯಲ್ಲಿ ಆಯಾ ಶಾಲೆಗೆ ಸಮೀಪ ಇರುವವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ತಿಳಿಸಿದರು.
ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ವತಿಯಿಂದ ಕ್ಷೌರಿಕ, ದೋಬಿ, ಬಡಗಿ ಮುಂತಾದ 148 ಕುಶಲಕರ್ಮಿಗಳಿಗೆ ಉಪಕರಣಗಳನ್ನೊಳಗೊಂಡ ಕಿಟ್ ನೀಡಲಾಗಿದೆ ಎಂದಾಗ ದೋಬಿಗಳಿಗೆ ಪ್ರಸ್ತುತ ಇಸ್ತ್ರಿ ಪೆಟ್ಟಿಗೆ, ಬಕೆಟ್ ಹಾಗೂ ಬೆಡ್ಶೀಟ್ಗಳನ್ನಷ್ಟೇ ವಿತರಿಸುತ್ತಿದ್ದು, ಇನ್ನು ಮಂದೆ ಸೈಕಲ್ ಚಕ್ರಗಳನ್ನೊಳಗೊಂಡ ತಳ್ಳುವ ಬಂಡಿಯನ್ನು ವಿತರಿಸಬೇಕೆಂದು ಸಭೆಯು ಸೂಚಿಸಿತು.
ಪೂರ್ವಭಾವಿ ಸಿದ್ಧತೆ: ವಯಸ್ಕರ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಸಾಕ್ಷರ ಭಾರತಿ ಕಾರ್ಯಕ್ರಮವು ಸೆಪ್ಟೆಂಬರ್ರಿಂದ ಪ್ರಾರಂಭವಾಗಲಿದ್ದು, ಈಗಾಗಲೆ ಪೂರ್ವಭಾವಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರಸ್ತುತ ಜಿಲ್ಲೆಯ ಗೌರಿಬಿದನೂರು, ಗುಡಿಬಂಡೆ ಹಾಗೂ ಬಾಗೇಪಲ್ಲಿ ತಾಲೂಕುಗಳಲ್ಲಿ ಶಿಕ್ಷಕರಿದ್ದು, ಚಿಂತಾಮಣಿ, ಶಿಡ್ಲಘಟ್ಟ ಹಾಗೂ ಚಿಕ್ಕಬಳ್ಳಾಪುರ ತಾಲೂಕುಗಳಲ್ಲಿ ವಯಸ್ಕರ ಶಿಕ್ಷಕರನ್ನು ನೇಮಿಸಲಾಗುವುದೆಂದು ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ತಿಳಿಸಿದರು. ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಇದ್ದರು.