ಮೂಲ ಸೌಕರ್ಯದ ಕೊರತೆ
ಶಿಡ್ಲಘಟ್ಟ: ದೇಶದಲ್ಲಿ ಜನಸಂಖ್ಯೆ ಹೆಚ್ಚಳದಿಂದಾಗಿ ನಾಗರಿಕರು ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದ್ದಾರೆ ಎಂದು ತಹಸೀಲ್ದಾರ್ ಜಿ.ಎ. ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಕೇಂದ್ರದಲ್ಲಿ ಆರೋಗ್ಯ ಇಲಾಖೆ ಆಶ್ರಯದಲ್ಲಿ ನಡೆದ ವಿಶ್ವಜನ ಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಜನಸಂಖ್ಯಾ ಸ್ಪೋಟ ಹೆಚ್ಚಾಗುತ್ತಿದ್ದು, ಭವಿಷ್ಯದಲ್ಲಿ ಜನಸಂಖ್ಯೆಯ ನಿಯಂತ್ರಣ ಮಾಡದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಅನಿಲ್ಕುಮಾರ್ ಮಾತನಾಡಿ, ವಿಶ್ವದೆಲ್ಲೆಡೆ ಜನಸಂಖ್ಯಾ ನಿಯಂತ್ರಣ ದಿನಾಚರಣೆ ಆಚರಿಸುತ್ತಿದ್ದು, ಕಾರ್ಯಕ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೇ ಜನಸಂಖ್ಯೆ ನಿಯಂತ್ರಣಕ್ಕೆ ಪೂರಕವಾಗುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಕೋರಿದರು. ಜಿಪಂ ಸದಸ್ಯ ಎಸ್.ಎಂ. ನಾರಾಯಣಸ್ವಾಮಿ, ತಾಪಂ ಹಂಗಾಮಿ ಅಧ್ಯಕ್ಷ ಗಂಜಿಗುಂಟೆ ನರಸಿಂಹಮೂರ್ತಿ ಮಾತನಾಡಿದರು. ಶಾಸಕ ಎಂ. ರಾಜಣ್ಣ ಗೈರುಹಾಜರಿಯಲ್ಲಿ ಅವರ ಪತ್ನಿ ಜಿಪಂ ಸದಸ್ಯೆ ಶಿವಲೀಲಾ ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಸುನೀತ, ಡಾ. ಪ್ರತಿಭಾ, ಡಾ. ವಿಜಯ್ಕುಮಾರ್, ಡಾ. ಶೀಲಾ, ಡಾ. ರಾಘವೇಂದ್ರಶರ್ಮ, ಡಾ. ವೈಶಾಲಿ, ಡಾ. ಉಷಾವಾಣಿಶ್ರೀ ಇದ್ದರು. ಕಾರ್ಯಕ್ರಮದ ನಂತರ ಡಾಲ್ಫಿನ್ ವಿದ್ಯಾಸಂಸ್ಥೆಯ ಪ್ರೌಢಶಾಲಾ ಮಕ್ಕಳು ಜನಸಂಖ್ಯೆ ನಿಯಂತ್ರಣದ ಕುರಿತು ಜನ ಜಾಗೃತಿ ಜಾಥಾ ನಡೆಸಿಸಿದರು.