ಯುವತಿ ರಕ್ಷಣೆ: ಬಿಜೆಪಿ ಮಹಿಳಾ ಮೋರ್ಚಾ ಒತ್ತಾಯ
ಕೋಲಾರ: ರಾಜ್ಯದಲ್ಲಿ ಪ್ರತಿನಿತ್ಯ 15 ರಿಂದ 22 ಮಂದಿ ಯುವತಿಯರು ಕಾಣೆಯಾಗುತ್ತಿದ್ದಾರೆಂದು ಇತ್ತೀಚೆಗೆ ಮಾಧ್ಯಮದಲ್ಲಿ ವರದಿ ಆಗಿರುವುದನ್ನು ಸ್ವತಃ ಗೃಹ ಸಚಿವರು ಒಪ್ಪಿಕೊಂಡಿದ್ದಾರೆ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಿರ್ಮಲ ಎಂ.ಎಸ್. ಆರೋಪಿಸಿದ್ದಾರೆ. ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ, ಇಡೀ ದಕ್ಷಿಣ ಭಾರತದಲ್ಲಿ ಮಹಿಳೆಯರ ಅಪಹರಣದಲ್ಲಿ ರಾಜ್ಯವು ಮೊದಲ ಸ್ಥಾನ ಪಡೆದಿರುವುದು, ರಾಜ್ಯದ ಜನತೆ ತಲೆ ತಗ್ಗಿಸುವಂತಹ ವಿಚಾರವಾಗಿದೆ. ಕೂಡಲೇ ಕ್ರಮ ಕೈಗೊಳ್ಳದೆ ಹೋದರೆ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಮಮತ, ನಗರ ಅಧ್ಯಕ್ಷೆ ಶಕುಂತಲ ದೀಕ್ಷಿತ್, ಜಿಲ್ಲಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಮಹಿಳಾ ಮುಖಂಡರಾದ ಗೌರಮ್ಮ, ಸುನಂದಮ್ಮ, ಪಾರ್ವತಮ್ಮ ಮತ್ತಿತರರು ಇದ್ದರು.
ಟಿ. ಚನ್ನಯ್ಯ ಜಯಂತಿ
ಆಚರಿಸಲು ನಿರ್ಧಾರ
ಕೋಲಾರ: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ನಿರ್ಮಾತೃ, ಮಾಜಿ ಸಚಿವ ದಿವಂಗತ ಟಿ. ಚೆನ್ನಯ್ಯನವರ 102 ನೇ ಜನ್ಮ ದಿನಾಚರಣೆಯನ್ನು ಅಕ್ಟೋಬರ್ 3 ರಂದು ಅದ್ಧೂರಿಯಾಗಿ ಆಚರಿಸಲು ದಿವಂಗತ ಟಿ. ಚೆನ್ನಯ್ಯರವರ ಶತಮಾನೋತ್ಸವ ಆಚರಣೆ ಮತ್ತು ಸ್ಮಾರಕ ನಿರ್ಮಾಣ ಸಮಿತಿ ತೀರ್ಮಾನಿಸಿದೆ. ಸ್ಮಾರಕ ಆನಾವರಣ, ಅವರ ಸಾಧನೆಗಳ ಸ್ಮರಣಸಂಚಿಕೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರೂಪಿಸಲು ಜು.13 ರ ಬೆಳಿಗ್ಗೆ 11 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಸಂಚಾಲಕ ಬಿ. ಪಿಳ್ಳಪ್ಪ ವಡಗೇರಿ ಅವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದೆ.
ನೀಲಗಿರಿ ನಿಷೇಧಕ್ಕೆ
ಸಹಿ ಸಂಗ್ರಹಣೆ
ಕೋಲಾರ: ಜಿಲ್ಲೆಯಾದ್ಯಂತ ನೀಲಗಿರಿ ನಿಷೇಧಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸಹಿ ಸಂಗ್ರಹ ಅಭಿಯಾನವನ್ನು ನಗರದ ಬಸ್ ನಿಲ್ದಾಣ ವೃತ್ತದಿಂದ ಆರಂಭಿಸಲಾಯಿತು.ನೀಲಗಿರಿ ನಿಷೇಧಿಸುವಂತೆ ಸರ್ಕಾರ ಆದೇಶವಿದ್ದರೂ ಸಹ ಅರಣ್ಯ ಅಭಿವೃದ್ಧಿ ನಿಗಮದ ವತಿಯಿಂದ ಹಮ್ಮಿಕೊಂಡಿದ್ದ ಸಹಿ ಅಭಿಯಾನ ಕಾರ್ಯಕ್ರಮದಲ್ಲಿ ಮುಖ್ಯವಾಗಿ ನೀಲಗಿರಿ ಬೆಳೆಯುವುದರಿಂದ ಜಿಲ್ಲೆ ಬರುಡುಭೂಮಿಯಾಗುತ್ತದೆ. ಆದ ಕಾರಣ ಶ್ರೀಗಂದ ಇತ್ಯಾದಿ ಪರ್ಯಾಯ ಬೆಳೆಗಳನ್ನು ಬೆಳೆಯುವಂತೆ ಜನರಲ್ಲಿ ಅರಿವು ಮೂಡಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ರೈತ ನಾಗಭೂಷಣ, ಸಾಮಾಜಿಕ ಕಾರ್ಯಕರ್ತ ಡಿ.ಮುನೇಶ್ ತಿಳಿಸಿದರು. ಅರಣ್ಯ ಅಭಿವೃದ್ಧಿ ಇಲಾಖೆಗೆ ನೀಲಗಿರಿ ನಿಷೇಧಿಸುವಂತೆ ಸರ್ಕಾರದ ಆದೇಶವಿದ್ದರೂ ಸಹ ನೀಲಗಿರಿಯಿಂದ ಯಾವುದೇ ತೊಂದರೆ ಇಲ್ಲವೆಂದು ಡೊಂಗಿ ಉತ್ತರಗಳನ್ನು ನೀಡುತ್ತಿದ್ದು, ಜಿಲ್ಲೆಯನ್ನು ಬರುಡು ಭೂಮಿಯಾಗಿಸಲು ಹೊರಟಿದ್ದಾರೆ. ಈ ಅಧಿಕಾರಿಗಳ ನೀಲಗಿರಿ ಬೆಳೆಸುವ ಜನವಿರೋಧಿ ಕ್ರಮವನ್ನು ಕಂಡಿಸಿ ಜಿಲ್ಲೆಯಾದ್ಯಂತ ಸಾರ್ವಜನಿಕರ ಸಹಿ ಸಂಗ್ರಹ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜನಪರ ಆಶೋತ್ತರದ ಸಂಗ್ರಹವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ನೀಲಗಿರಿ ನಿಷೇಧಿಸುವಂತೆ ಸರ್ಕಾರಕ್ಕೆ ಒತ್ತಾಯವೇರಲಾಗುವುದು ಎಂದು ತಿಳಿಸಿದ್ದಾರೆ.