ವಾಹನ ಡಿಕ್ಕಿ; ವೃದ್ಧನ ಸಾವು
ಮುಳಬಾಗಲು: ದ್ವಿಚಕ್ರವಾಹನ ಡಿಕ್ಕಿ ಹೊಡೆದು ವೃದ್ಧರೊಬ್ಪರು ಸಾವಿಗೀಡಾದ ಘಟನೆ ಪಟ್ಟಣದ ತಾಯಲೂರು - ವೇಗಮೊಡಗು ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದೆ. ಮೃತನನ್ನು ಚಿನ್ನೇನಹಳ್ಳಿ ಗ್ರಾಮದ ಗೋವಿಂದಪ್ಪ(60) ರಸ್ತೆ ದಾಟುವ ವೇಳೆ ಅಪಘಾತ ನಡೆದಿದೆ. ಮುಳಬಾಗಲು ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಅತ್ಯಾಚಾರ: ಬಿಜೆಪಿ ಖಂಡನೆ
ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರ ತಾಲೂಕಿನ ನೆಲವಂಕಿ ಹೋಬಳಿಯ ಎಸ್. ಗೊಲ್ಲಪಲ್ಲಿಯಲ್ಲಿ ಇತ್ತೀಚಿಗೆ 4 ವರ್ಷದ ಹಸುಳೆ ಮೇಲೆ ನಡೆದ ಅತ್ಯಾಚಾರವನ್ನು ಖಂಡಿಸಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳಾ ಮಾತನಾಡಿ, ಇತ್ತೀಚಿಗೆ ಜಿಲ್ಲೆಯಲ್ಲಿ ಅತ್ಯಾಚಾರ ಮಾನಭಂಗ, ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಿದೆ. ಧೈರ್ಯವಾಗಿ ಮಹಿಳೆಯರು ಓಡಾಡದಂತಾಗಿದೆ. ಮಹಿಳೆಯರ ರಕ್ಷಣೆಗಾಗಿ ಜಿಲ್ಲೆಯಲ್ಲಿ ಮಹಿಳಾ ಠಾಣೆಗಳು ಪ್ರಾರಂಭಿಸಬೇಕು. ಪ್ರತಿ ಹೋಬಳಿಗೆ ಒಂದು ಮಹಿಳಾ ಔಟ್ಪೋಸ್ಟ್ ತೆರೆದು ಮಹಿಳೆಯರ ರಕ್ಷಣೆಗೆ ಮುಂದಾಗಬೇಕೆಂದು ಮನವಿ ಮಾಡಿದರು. ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಅರುಣ, ರಾಜ್ಯ ಸದಸ್ಯಣಿ ಆಶಾರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವಕಿ, ಪದಾಧಿಕಾರಿಗಳಾದ ಉಮಾದೇವಿ, ರತ್ನಮ್ಮ, ಗೀತಾ ಮನವಿ ಸಲ್ಲಿಸುವ ಸಂದರ್ಭದಲ್ಲಿ ಹಾಜರಿದ್ದರು.
ಬಾಲಕನ ಮೇಲೆ ನಾಯಿ ದಾಳಿ
ಕೋಲಾರ/ಶ್ರೀನಿವಾಸಪುರ: ಶ್ರೀನಿವಾಸಪುರ ಪಟ್ಟಣದಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರು ಆತಂಕಗೊಂಡಿದ್ದಾರೆ. ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾದಲ್ಲಿ 3 ವರ್ಷದ ಷೇಕ್ ರಿಹಾನ್ ಎಂಬ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿ ಗಾಯಗೊಳಿಸಿದೆ. ಜನತೆ ಪುರಸಭೆಯ ವಿರುದ್ಧ ಆಕ್ರೋಶಗೊಂಡಿದ್ದಾರೆ. ಪುರಸಭೆಯವರು ಕೂಡಲೇ ಕಾರ್ಯಾಚರಣೆ ಕೈಗೊಂಡು ಬೀದಿ ನಾಯಿ ಮತ್ತು ಹಂದಿಗಳನ್ನು ಪಟ್ಟಣದಿಂದ ಹೊರ ಹಾಕಬೇಕೆಂದು ಜನತೆ ಒತ್ತಾಯಿಸಿದ್ದಾರೆ.
ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ
ಶಿಡ್ಲಘಟ್ಟ: ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಪಟ್ಟಣದ ಜೌಗುಪೇಟೆಯ ನಿವಾಸಿ ಗೋಪಾಲಪ್ಪ (30) ಮೃತ ವ್ಯಕ್ತಿ. ಇದ್ಲೂಡು ಗ್ರಾಮಕ್ಕೆ ಸೇರಿದ ತೋಟದ ಪ್ರದೇಶದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಗೋಪಾಲಪ್ಪನ ತಂದೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.
ಕಾಲೇಜಿನಲ್ಲಿ ಕಳ್ಳತನಕ್ಕೆ ಯತ್ನ
ಶಿಡ್ಲಘಟ್ಟ: ಪದವಿ ಪೂರ್ವ ಕಾಲೇಜಿನ ಮೆಟ್ಟಿಲಿಗೆ ಅಳವಡಿಸಿದ್ದ ಕಬ್ಬಿಣದ ಪೈಪ್ಗಳನ್ನು ಕತ್ತರಿಸಿ ಕಳವು ಮಾಡಲು ಯತ್ನಿಸಿರುವ ಘಟನೆ ನಡೆದಿದೆ. ನೂತನವಾಗಿ ನಿರ್ಮಾಣವಾಗಿರುವ ಕಾಲೇಜಿಗೆ ಮೂಲ ಸೌಕರ್ಯ ಒದಗಿಸದಿರುವ ಕಾರಣ ಕಾಲೇಜಿನ ಆವರಣ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕಾಲೇಜಿಗೆ ವ್ಯವಸ್ಥಿತವಾದ ಕಾಂಪೌಂಡ್ ಇಲ್ಲ, ಇಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಇಲ್ಲ, ರಾತ್ರಿ ವೇಳೆ ವಿದ್ಯುತ್ ದೀಪ ಇಲ್ಲ. ಕಾಲೇಜಿನ ಕಂಪ್ಯೂಟರ್ ಕೊಠಡಿಗೆ ಬೆಂಕಿ ಹಚ್ಚುವ ಪ್ರಯತ್ನಗಳೂ ನಡೆದಿವೆ ಎಂದು ಪ್ರಾಂಶುಪಾಲರು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಕಾಲೇಜಿನ ಆವರಣಕ್ಕೆ ಬರುವ ಕೆಲ ಕಿಡಿಗೇಡಿಗಳು ಪಾಠಪ್ರವಚನಗಳು ನಡೆಯುವಾಗ ಬೈಕ್ ಓಡಿಸುವುದು, ಕಾಲೇಜಿನಲ್ಲೇ ಮಲಮೂತ್ರ ವಿಸರ್ಜನೆ ಮಾಡುವುದು ಮಾಡುತ್ತಾರೆ. ಈ ಬಗ್ಗೆ ಪುರಠಾಣೆಯಲ್ಲಿ ದೂರು ದಾಖಲಿಸಿರುವುದಾಗಿ ಪ್ರಾಂಶುಪಾಲರು ತಿಳಿಸಿದ್ದಾರೆ.