ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಕೋಲಾರ ಜಿಲ್ಲಾ ಬಿಜೆಪಿ ಸಾರಥಿಗಾಗಿ ಶೋಧನೆ

Rashmi Kasaragodu
Updated On : 13 Jul 2014, 1:44 am

ಕೋಲಾರ: ಜಿಲ್ಲಾ ಬಿಜೆಪಿಗೆ ಒಬ್ಬ ಸಮರ್ಥ ನಾಯಕನಿಗಾಗಿ ಶೋಧನೆ ನಡೆದಿದೆ.
ಮುಂದಿನ ವರ್ಷ ನಡೆಯುವ ಜಿಲ್ಲಾ ಮತ್ತು ತಾಪಂ ಚುನಾವಣೆಯಲ್ಲಿ ಪಕ್ಷದ ಶಕ್ತಿ ಸಾಮರ್ಥ್ಯ ಸಾಬೀತು ಪಡಿಸಲು ಉತ್ತಮ ಸಂಘಟನಕಾರ ಹಾಗೂ ಎಲ್ಲಾ ಕಾರ್ಯಕರ್ತರನ್ನು ವಿಶ್ವಾಸದಿಂದ ನೋಡುವ ನಾಯಕನ ಅವಶ್ಯಕತೆ ಇದೆ ಎಂಬ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಅಭಿಪ್ರಾಯಗಳಿಗೆ ಬೆಲೆ ನೀಡುವ ಉದ್ದೇಶದಿಂದ ಸಮರ್ಥ ನಾಯಕನಿಗಾಗಿ ಹುಟುಕಾಟ ನಡೆದಿದ್ದು ಹೊಸ ಸಾರಥಿಯ ಆಯ್ಕೆಯ ವಾಸನೆ ಗೊತ್ತಾಗುತ್ತಿದ್ದಂತೆ ಕೆಲವರು ಲಾಬಿಗೆ ಮುಂದಾಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಮುಖಭಂಗ, ಆಗ್ನೇಯ ಪದವೀಧರರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವೈಫಲ್ಯ,ಶ್ರೀರಾಮ್, ಲಕ್ಷ್ಮಯ್ಯ ಅಧ್ಯಕ್ಷರಾಗಿದ್ದಾಗ ಸ್ಪೋಟಗೊಂಡಿದ್ದ ಗುಂಪುಗಾರಿಕೆ, ಹಾಲಿ ಅಧ್ಯಕ್ಷ ಕೃಷ್ಣಾರೆಡ್ಡಿ ಸಾಧು ಸ್ವಾಭಾವದವರಾದರೂ ಸಂಘಟನೆಯ ವಿಚಾರದಲ್ಲಿ ವಿಫಲರಾಗಿರುವುದರಿಂದ ಪಕ್ಷದ ಉಳಿವಿಗಾಗಿ ದಕ್ಷರೊಬ್ಬರನ್ನು ನಾಯಕನನ್ನಾಗಿ ಮಾಡಬೇಕೆಂಬ ಚಿಂತನೆ ನಡೆದಿದೆ. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾ ಬಿಜೆಪಿಯಲ್ಲಿ ಬದಲಾವಣೆ ಆಗಬೇಕೆಂದು ಪ್ರತಿಪಾದಿಸಿದ್ದಾರೆ. ಪಕ್ಷದೊಳಗಿನ ಗುಂಪುಗಾರಿಕೆ, ಆಶಿಸ್ತಿಗೆ ಕಡಿವಾಣ ಹಾಕದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲವೆಂದು ನಿಷ್ಠಾವಂತ ಕಾರ್ಯಕರ್ತರು ಮಾಧ್ಯಮಗಳ ಮುಂದೆ ಅಭಿಪ್ರಾಯ ತೋಡಿಕೊಂಡಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಮಿತ್ ಶಾ ನೇಮಕವಾಗಿರುವುದರಿಂದ ಅವರ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಿಸುವ ಸಿಫಾಯಿಗಳು ಬೇಕಾಗಿರುವುದರಿಂದ ಅದು ಕೋಲಾರ ಜಿಲ್ಲೆಯಿಂದಲೇ ಆಗಬೇಕೆಂದು ಆಸೆ ಹೊತ್ತಿದ್ದಾರೆ. ಈ ಸಂಬಂಧ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿಯವರೊಂದಿಗೂ ಚರ್ಚಿಸಿ ಶೀಘ್ರವೇ ಕೋಲಾರ ಜಿಲ್ಲಾ ಬಿಜೆಪಿಗೆ ಮೇಜರ್ ಸರ್ಜರಿ ಮಾಡಿಸುವುದಾಗಿ ಹೇಳಿಕೊಂಡಿದ್ದಾರೆ. ಇನ್ನು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಪ್ರಯತ್ನಿಸಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ಜಿಲ್ಲಾ ಬಿಜೆಪಿಗೆ ತಾಯಿ ಹೃದಯದ ಸಾರಥಿ ಬೇಕೆಂದು ತಮ್ಮ ಬೆಂಬಲಿಗರಲ್ಲಿ ಹೇಳಿಕೊಂಡಿದ್ದಾರೆ. ತಾನು ಕೋಲಾರ ಜಿಲ್ಲೆಯಲ್ಲಿ ಹುಟ್ಟಿ ಬೆಳೆಯದಿದ್ದರೂ ತನಗೆ ರಾಜಕೀಯವಾಗಿ ಶಕ್ತಿ ನೀಡಿರುವ ಕೋಲಾರ ಜಿಲ್ಲೆಯ ಋಣ ತೀರಿಸಲು ಬದ್ಧನಾಗಿರುವುದರಿಂದ ಪಕ್ಷದ ನಾಯಕರು ಜಿಲ್ಲಾ ಸಾರಥಿ ವಿಚಾರದಲ್ಲಿ ಸಲಹೆ ಕೇಳಿದಲ್ಲಿ ನೀಡುವುದಕ್ಕೆ ಸಿದ್ಧನೆಂದು ತಿಳಿಸಿದ್ದಾರೆ.
ಬಂಗಾರಪೇಟೆ ಮಾಜಿ ಶಾಸಕ ಬಿ.ವಿ. ವೆಂಕಟಮುನಿಯಪ್ಪ, ಲೋಕಸಭಾ ಚುನಾವಣೆಯಲ್ಲಿ ಸೋತ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ, ಕೆಜಿಎಫ್ ಮಾಜಿ ಶಾಸಕ ವೈ. ಸಂಪಂಗಿ, ಜಿಪಂ ಮಾಜಿ ಸದಸ್ಯ ಮಾಲೂರಿನ ರಾಮೇಗೌಡ, ಬಂಗಾರಪೇಟೆ ತಾಲೂಕು ಮಾಜಿ ಅಧ್ಯಕ್ಷ ರಾಜಶೇಖರ್, ನಾಗಪ್ರಕಾಶ್, ಕೋಲಾರದ ಜಗದೀಶ್ವರಾಚಾರಿ, ಕುಡಾ ಮಾಜಿ ಅಧ್ಯಕ್ಷ ಶ್ರೀರಾಮ್, ಸ್ಲಮ್ಮೋರ್ಚಾ ರಾಜ್ಯ ಕಾರ್ಯದರ್ಶಿ ನೀಲಿ ಜೈಶಂಕರ್, ಹಾಲಿ ನಗರ ಸಮಿತಿ ಅಧ್ಯಕ್ಷ ಜಯಂತಿಲಾಲ್, ಎಸ್ಸಿ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ವೆಂಕಟೇಶ ಮೌರ್ಯ, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ವಿಜಯಕುಮಾರ್, ಜಿಲ್ಲಾ ಸಮಿತಿ ಹಾಲಿ ಉಪಾಧ್ಯಕ್ಷ ನರಸಿಂಹರಾಜು, ಶ್ರೀನಿವಾಸಪುರದ ಲಕ್ಷ್ಮಣಗೌಡ, ಜಿಪಂ ಮಾಜಿ ಸದಸ್ಯ ರಾಜಣ್ಣ, ವಕೀಲ ಮಾಗೇರಿ ನಾರಾಯಣಸ್ವಾಮಿ, ಮಾಜಿ ಅಧ್ಯಕ್ಷ ಸುರೇಂದ್ರಗೌಡ ಸೇರಿದಂತೆ ಸುಮಾರು ಎರಡು ಡಜನ್‌ನಷ್ಟು ಮುಖಂಡರು ಹೊಸ ಸಾರಥಿ ಆಗಲು ಅವಕಾಶ ಸಿಕ್ಕಲ್ಲಿ ಜವಾಬ್ದಾರಿ ನಿಬಾಯಿಸುವುದಾಗಿ ಇಂಗಿತ ವ್ಯಕ್ತಪಡಿಸಿದ್ದಾರೆ.
ಆರ್‌ಎಸ್‌ಎಸ್ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಮಾಜಿ ಅಧ್ಯಕ್ಷ ಎನ್. ಲಕ್ಷ್ಮಯ್ಯನವರಿಗೆ ಮತ್ತೊಂದು ಅವಕಾಶ ನೀಡಬೇಕೆಂಬ ವಾದವನ್ನು ಕೆಲವರು ಮಂಡಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಉಂಟಾಗಿ ಪಕ್ಷಕ್ಕೆ ನಷ್ಟವಾಗುವುದನ್ನು ತಪ್ಪಿಸಬೇಕಾದರೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿಯವರಿಗೆ ಅಧ್ಯಕ್ಷ ಪಟ್ಟ ಕಟ್ಟಬೇಕೆಂಬ ಅಭಿಪ್ರಾಯ ಕೇಳಿ ಬರುತ್ತಿದ್ದು ಜಿಲ್ಲೆಯ ಬಿಜೆಪಿಯ ಸಾರಥಿ ಯಾರಾಗುತ್ತಾರೋ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement