ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ದಾರಿ ತಪ್ಪಿದವರು ಸಿಕ್ಕರು

Rashmi Kasaragodu
Updated On : 13 Jul 2014, 1:43 am

ಕೋಲಾರ: ಟ್ರಕ್ಕಿಂಗ್ ಮಾಡಲು ಕೋಲಾರದ ಅಂತರಗಂಗೆ ಬೆಟ್ಟ ಮತ್ತು ತೇರಹಳ್ಳಿ ಬೆಟ್ಟಕ್ಕೆ ಬಂದಿದ್ದ ಐವರು ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ದಾರಿ ತಪ್ಪಿ ಕೊನೆಗೆ ಗ್ರಾಮಾಂತರ ಪೊಲೀಸರ ಕಾರ್ಯಾಚರಣೆಯಿಂದ ಸುರಕ್ಷಿತ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ಶನಿವಾರ ನಡೆದಿದೆ.
ಬೆಂಗಳೂರಿನ ಐಐಟಿ ಕಾಲೇಜಿನಲ್ಲಿ ಓದುತ್ತಿರುವ ಉತ್ತರ ಭಾರತದ ಅಭಿಷೇಕ್ ಚೌದರಿ, ಚಟರ್ಜಿ, ಆಗಸ್ತ್ಯ ಸೇರಿದಂತೆ ಐವರು ವಿದ್ಯಾರ್ಥಿಗಳು ಶನಿವಾರ ಬೆಂಗಳೂರಿನಿಂದ ಮೋಟಾರ್ ಬೈಕ್‌ನಲ್ಲಿ ಟ್ರಕ್ಕಿಂಗ್ ಮಾಡಲು ಬಂದಿದ್ದರು. ಟ್ರಕ್ಕಿಂಗ್ ಮಾಡುವಾಗ ಈ ಐವರು ದಾರಿ ತಪ್ಪಿ ಚಿರತೆ ಮುಂತಾದ ವನ್ಯ ಪ್ರಾಣಿಗಳ ತಾಣಕ್ಕೆ ಸೇರಿ ಸಂಕಷ್ಟಕ್ಕೆ ಸಿಲುಕಿದ್ದರು.
ಸಧ್ಯಕ್ಕೆ ಇವರ ಬಳಿ ಇದ್ದ ಮೊಬೈಲ್ ಫೋನ್‌ಗಳು ಚಾಲ್ತಿಯಲ್ಲಿ ಇದ್ದುದ್ದರಿಂದ ಗೆಳೆಯರಿಗೆ ಸಂದೇಶ ರವಾನಿಸಿ ರಕ್ಷಣೆ ಮಾಡುವಂತೆ ಕೋರಲು ಸಾಧ್ಯವಾಯಿತು.
ಐಐಟಿ ಕಾಲೇಜಿನ ವಿದ್ಯಾರ್ಥಿಗಳು ಅಪಾಯದಲ್ಲಿ ಸಿಲುಕಿರುವುದನ್ನು ಗೆಳೆಯರು ಜಿಲ್ಲಾ ಪೊಲೀಸ್ ಕಚೇರಿಗೆ ತಿಳಿಸಿದ್ದರು. ಅಲ್ಲಿಂದ ಮಾಹಿತಿ ಪಡೆದ ಗ್ರಾಮಾಂತರ ಪೊಲೀಸರು ಸುಮಾರು ನಾಲ್ಕೈದು ಗಂಟೆ ಗಾಢವಾದ ಬೆಟ್ಟ ಗುಡ್‌ಡಗಳಲ್ಲಿ ಕಾರ್ಯಾಚರಣೆ ಆರಂಭಿಸಿ ಮೊಬೈಲ್ ಫೋನ್‌ಗಳಲ್ಲಿ ಮಾಹಿತಿ ಸಂಗ್ರಹಿಸುತ್ತಾ ವಿದ್ಯಾರ್ಥಿಗಳು ಇರುವ ಜಾಗಕ್ಕೆ ತಲುಪಿ ಅಪಾಯದಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಕರೆತಂದಿದ್ದಾರೆ. ಅಂತರಗಂಗೆ ಬೆಟ್ಟ, ತೇರಹಳ್ಳಿ ಬೆಟ್ಟದಿಂದ ಈ ವಿದ್ಯಾರ್ಥಿಗಳು ನಾಗಲಾಪುರದ ದಟ್ಟವಾದ ಅರಣ್ಯಕ್ಕೆ ಪ್ರವೇಶಿಸಿ ಅಲ್ಲಿಂದ ಪೊಲೀಸರ ಸೂಚನೆಯಂತೆ ಬೆಟ್ಟದ ಹೊಸಹಳ್ಳಿಗೆ ಬಂದು ಪೊಲೀಸರ ಮಡಿಲು ಸೇರಿದ್ದಾರೆ. ಪತ್ತೆಯಾದ ವಿದ್ಯಾರ್ಥಿಗಳನ್ನು ಪೊಲೀಸರು ಗ್ರಾಮಾಂತರ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ ಬಳಿಕ ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ.
ಬೈಕ್ ಕಳವು
ಕೆಜಿಎಫ್: ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿಸಿದ್ದ ಬೈಕ್ ಕಳವು ಮಾಡಿರುವ ಘಟನೆ ಬೆಮೆಲ್‌ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪುಲಿಯೇಂದ್ರ ಲೇಔಟ್ ನಿವಾಸಿ ಟಿ. ಭರತ್ ಎಂಬುವರು ಮನೆಯ ಕಾಂಪೌಂಡ್‌ನಲ್ಲಿ ನಿಲ್ಲಿದ್ದ ಬೈಕ್ ನಾಪತ್ತೆಯಾಗಿದ್ದು, ಠಾಣೆಗೆ ದೂರು ನೀಡಿದ್ದಾರೆ.
ಮಾರಕಾಸ್ತ್ರಗಳಿಂದ ಹಲ್ಲೆ
ಕೆಜಿಎಫ್: ವ್ಯಕ್ತಿಯೊಬ್ಬರಿಗೆ ಸೇರಿದ ಜಮೀನಿಗೆ ಸುಳ್ಳು ದಾಖಲಾತಿ ತಯಾರಿಸಿ ಮೋಸ ಮಾಡಿರುವುದನ್ನು ಕೇಳಿದ್ದಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಯತ್ನ ನಡೆಸಿದ ಘಟನೆ ಬೇತಮಂಗಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿಲ್ಲಗುಂಡಲಹಳ್ಳಿ ನಿವಾಸಿ ಜಯಪ್ಪ(50) ಎಂಬುವರ ತಂದೆ ವೆಂಕಟಪ್ಪ ಅವರು ವೆಂಗಯ್ಯನಾಯ್ಡು ಅವರಿಂದ ಪಿಲ್ಲಗುಂಡಲಹಳ್ಳಿ ಗ್ರಾಮದ  ಜಮೀನಿನ ಸರ್ವೆ ಸಂಖ್ಯೆ 15-2ರಲ್ಲಿ 34 ಗುಂಟೆ ಜಮೀನನ್ನು ಖರೀದಿಸಿ ನೊಂದಣಿ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ರಾಯಸಂದ್ರ ಗ್ರಾಮದ  ಚಿನ್ನಪನ್ನ, ಜಯಮ್ಮ, ಪಿಲ್ಲಗುಂಡಹಳ್ಳಿ ಸುಬ್ರಮಣಿ, ಬೂದಿಮಿಟ್ಟ ಗ್ರಾಮದ ಜಗನ್ನಾಥ, ಗೆನ್ನೇರನಹಳ್ಳಿ ಗ್ರಾಮದ ಶ್ರೀರಾಮರೆಡ್ಡಿ ಹಾಗೂ ಬಡಮಾಕನಹಳ್ಳಿ ಗ್ರಾಮದ ದೇವರಾಜ್ ಎಂಬುವರು ಸದರಿ ಜಮೀನಿಗೆ ಸುಳ್ಳು ದಾಖಲೆ ತಯಾರಿಸಿ ಜಯಪ್ಪ ಎಂಬುವರಿಗೆ ಮೋಸ ಮಾಡಿದ್ದು ಅದನ್ನು ಕೇಳಿದಕ್ಕೆ ಚಿನ್ನಪ್ಪನ್ನ ಮತ್ತು ಜಯಮ್ಮ ಅವಾಚ್ಯಶಬ್ದಗಳಿಂದ ನಿಂದಿಸಿ ಆಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಜಯಪ್ಪ ಬೇತಮಂಗಲ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಂಗಡಿಯಲ್ಲಿ ಕಳವು
ಕೆಜಿಎಫ್: ಅಂಗಡಿ ಶೆಟರ್ ಮೀಟಿ ಒಳ ನುಗ್ಗಿದ ಕಳ್ಳರು ಟೇಬಲ್‌ನಲ್ಲಿದ್ದ ನಗದು ಕಳವು ಮಾಡಿರುವ ಘಟನೆ ಬೆಮೆಲ್‌ನಗರ ಠಾಣಾ ವ್ಯಾಪ್ತಿಯ ದಾಸರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಜಿ. ಕೃಷ್ಣಮೂರ್ತಿ ಎಂಬುವರು ದಾಸರಹೊಸಹಳ್ಳಿಯಲ್ಲಿ ತಿರುಮಲ ಕಿರಾಣಿ ಅಂಗಡಿ ನಡೆಸುತ್ತಿದ್ದು, ಅಂಗಡಿಯ ಟೋಬಲ್‌ನಲ್ಲಿಟ್ಟಿದ್ದ ನಗದು ಕಳವು ಮಾಡಲಾಗಿದೆ ಎಂದು ಬೆಮೆಲ್‌ನಗರ ಠಾಣೆಗೆ ದೂರು ನೀಡಿದ್ದಾರೆ.
ಹಲ್ಲೆ: ಪ್ರಕರಣ ದಾಖಲು
ಕೆಜಿಎಫ್: ಹಳೇ ದ್ವೇಷದಿಂದ ಚಾಕುವಿನಿಂದ ಕೊಲೆ ಪ್ರಯತ್ನ ನಡೆಸಿರುವ ಘಟನೆ ಆಂಡ್ರಸನ್‌ಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಂಡಾರಂ ಲೈನ್ ನಿವಾಸಿ ವಿಜಯಕುಮಾರ್ ಎಂಬುವರ ಮಗನಾದ ಭರಣಿ ಎಂಬ ಬಾಲಕ ತನ್ನ ಸ್ನೇಹಿತ ಶರತ್‌ನೊಂದಿಗೆ ಮಾರ್ಕೆಟ್‌ಗೆ ಹೋಗುತ್ತಿದ್ದಾಗ ಅದೇ ಕೇರಿಯ ನಿವಾಸಿ ಅರವಿಂದ್ ಎಂಬುವ ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಭರಣಿ ಆಂಡ್ರಸನ್ ಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಪಘಾತ: ಇಬ್ಬರ ಸಾವು
ಮುಳಬಾಗಲು: ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ದ್ವಿಚಕ್ರವಾಹನ ಸವಾರರಿಬ್ಬರು ಸ್ಧಳದಲ್ಲಿಯೇ ಮೃತಪಟ್ಟ ಪ್ರಕರಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 4ರ ಕಮ್ಮದಟ್ಟಿ ಕಾಮನೂರು ಗ್ರಾಮದ ಬಳಿ ಶುಕ್ರವಾರ ರಾತ್ರಿ ನಡೆದಿದೆ. ಮೃತರನ್ನು ತಾಲೂಕಿನ ದೊಡ್ಡಗಾನಹಳ್ಳಿ ಗ್ರಾಮದ ವೆಂಕಟಪ್ಪ(65) ಮತ್ತು ನಾರಾಯಣಸ್ವಾಮಿ(35) ಎಂದು ಗುರ್ತಿಸಲಾಗಿದೆ ಎಂದು ಮುಳಬಾಗಲು ಪೊಲೀಸರು ತಿಳಿಸಿದ್ದಾರೆ.
ಹೃದಯಾಘಾತದಿಂದ ಸಾವು
ಚಿಂತಾಮಣಿ: ಕೈವಾರದಲ್ಲಿ ಯೋಗಿನಾರೇಯಣ ತಾತಯ್ಯನವರ ಗುರುಪೌರ್ಣಮಿ ಅಂಗವಾಗಿ ದೇವಾಲಯಕ್ಕೆ ಬಂದ ಭಕ್ತನೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ.
ತಾಲೂಕಿನ ಕೈವಾರದ ಯೋಗಿನಾರೇಯಣ ತಾತಯ್ಯನವರ ಗುರುಪೌರ್ಣಮಿ ಅಂಗವಾಗಿ ಶುಕ್ರವಾರದಂದು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಲಮನೇರು ತಾಲೂಕಿನ ಸಮುದ್ರಂಪಲ್ಲಿ ಗ್ರಾಮದ ಗಟ್ಟಪ್ಪ(55) ಎಂಬಾತ ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಾಂತರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement