ಪುರಾತನ ದೇವಾಯಜೀರ್ಣೋದ್ಧಾರಕ್ಕೆ ಕರೆ
ಮುಳಬಾಗಲು: ನೂತನ ದೇವಾಲಯಗಳ ನಿರ್ಮಾಣಕ್ಕೆ ಬದಲಾಗಿ ಪುರಾತನ ದೇವಾಲಯಗಳನ್ನು ಜೀರ್ಣೊದ್ಧಾರಗೊಳಿಸುವುದು ಉತ್ತಮವಾದ ಕೆಲಸವೆಂದು ಯಾದವ ಸಂಘದ ಮುಖಂಡ ಮುಕ್ಕಡ್ ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲೂಕಿನ ಬೇವನತ್ತ ಗ್ರಾಮದಲ್ಲಿ ಶನಿವಾರ ತಮ್ಮ ಸ್ವಂತ ಹಣದಿಂದ ಜೀರ್ಣೊದ್ಧಾರಗೊಳಿಸುತ್ತಿರುವ ಗ್ರಾಮದ ರೇಣುಗೋಪಾಲಸ್ವಾಮಿ ದೇವಾಲಯದ ಕಾಮಗಾರಿಗಳನ್ನು ಪರಿಶೀಲಿಸಿ ಮಾತನಾಡಿದರು. ದೇವಾಲಯಗಳು ಗ್ರಾಮದ ಸಾಂಸ್ಕೃತಿಕ ಪ್ರತೀಕಗಳಾಗಿವೆ. ದೇವಾಲಯಗಳ ಕಾರಣ ಗ್ರಾಮಗಳಲ್ಲಿ ಶಾಂತಿ ಸೌಹಾರ್ದತೆ ನೆಲೆಸಿದೆ ಎಂದರು. ಯಾದವ ಜನಾಂಗದ ಯುವ ಮುಖಂಡ ಗಣೇಶ್ ಯಾದವ್ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ವಿದ್ಯುತ್ ವ್ಯತ್ಯಯ ಇಂದು
ಶಿಡ್ಲಘಟ್ಟ: 13ರಂದು ಪಟ್ಟಣದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವುದರಿಂದ ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಸಹಾಯಕ ಅಭಿಯಂತರ ಅನ್ಸರ್ ಪಾಷಾ ತಿಳಿಸಿದ್ದಾರೆ.
ಆರೋಗ್ಯಕ್ಕೆ ಆದ್ಯತೆ ನೀಡಬೇಕು
ಮಾಲೂರು: ಹಣ, ಅಸ್ತಿಗಿಂತ ಆರೋಗ್ಯವೇ ಮುಖ್ಯವಾಗಿರುವುದರಿಂದ ಗ್ರಾಮೀಣ ಭಾಗದ ಜನತೆ ಆರೋಗ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಕೆನರಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶಿವಶಂಕರ್ ರಾವ್ ಕರೆ ನೀಡಿದರು. ಅವರು ತಾಲೂಕಿನ ಅಬ್ಬೇನಹಳ್ಳಿ ಪಂಚಾಯ್ತಿಯ ಕಂಬೀಪುರದಲ್ಲಿ ಜಾಲಪ್ಪ ಆಸ್ವತ್ರೆ ಸಹಕಾರದಲ್ಲಿ ಸ್ಥಳೀಯ ಕೆನರಾ ಬ್ಯಾಂಕ್ ಘಟಕ ಆಯೋಜಿಸಿದ್ದ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದ ಜನತೆ ದುಡಿಯುವ ಭರದಲ್ಲಿ ಆರೋಗ್ಯ ಕಡೆ ಹೆಚ್ಚಿನ ಗಮನ ನೀಡುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಗ್ರಾಮೀಣ ಜನತೆ ಚಿಕಿತ್ಸೆ ದುಬಾರಿಯಾಗಬಹುದೆಂಬ ಭಯದಲ್ಲಿ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ. ಅದಕ್ಕಾಗಿ ಸರ್ಕಾರದ ಜತೆಯಲ್ಲಿ ಸಂಘ-ಸಂಸ್ಥೆಗಳು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಳ್ಳುವ ಉಚಿತ ಆರೋಗ್ಯ ಶಿಬಿರಗಳ ಸದುಪಯೋಗ ಪಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕೆಂದೆರು. ಕೆನರಾ ಬ್ಯಾಂಕ್ ಈ ಕಂಬಿಪುರವನ್ನು ದತ್ತು ಪಡೆದುಕೊಂಡಿದ್ದು, ಆರೋಗ್ಯ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಶ್ರಮ ವಹಿಸುತ್ತಿರುವುದಾಗಿ ತಿಳಿಸಿದರು. ಕೆನರಾ ಬ್ಯಾಂಕ್‌ನ ಸ್ಥಳೀಯ ಘಟಕದ ವ್ಯವಸ್ಥಾಪಕಿ ಉಷಾ ರಾಮ್ ಕುಮಾರ್, ಬಾಲಕೃಷ್ಣ, ನಾಗವೇಣಿ, ಜಾಲಪ್ಪ ಆಸ್ವತ್ರೆಯ ಸಂಪರ್ಕ ಅಧಿಕಾರಿ ಡಾ.ಎಸ್.ಕೃಷ್ಣಮೂರ್ತಿ, ಕೆಪಿಸಿಸಿ ಎಸ್ಸಿಎಸ್ಟಿ ವಿಭಾಗದ ಪ್ರಧಾನ ಕಾರ್ಯದರ್ಶಿ ಎನ್.ವೆಂಕಟರಾಮ್, ನಾರಾಯಣಸ್ವಾಮಿ, ಲಕ್ಷ್ಮಯ್ಯ, ಶಿಕ್ಷಕ ಉಮೇಶ್ ಇದ್ದರು.