ಮಹಿಳೆ ಸ್ವಉದ್ಯೋಗದತ್ತ ಗಮನಹರಿಸಲಿ
ನಾಗಮಂಗಲ: ಮಹಿಳೆಯರು ಸ್ವ ಉದ್ಯೋಗ, ಗುಡಿ ಕೈಗಾರಿಕೆ ಸ್ಥಾಪಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಾಲೂಕು ಪಂಚಾಯ್ತಿ ಅಧ್ಯಕ್ಷ ಮೂಡ್ಲೀಗೌಡ ತಿಳಿಸಿದರು.
ಪಟ್ಟಣದ ಮಿನಿವಿಧಾನಸೌಧದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ತಾಲೂಕಿನ ಆಯ್ದ ಸ್ತ್ರೀ ಶಕ್ತಿ ಸಂಘಗಳಿಗೆ ಚೆಕ್ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ ಮಹಿಳೆಯರನ್ನು ಆರ್ಥಿಕವಾಗಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಸಬ್ಸಿಡಿ ರೂಪದಲ್ಲಿ ಸಾಲಸೌಲಭ್ಯ ಕಲ್ಪಿಸುತ್ತಿದೆ. ಇದರ ಉಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು. ಮಹಿಳೆಯರು ಹೈನುಗಾರಿಕೆ, ಆಟಿಕೆ ಪದಾರ್ಥ, ಗೃಹಬಳಕೆ ಪದಾರ್ಥ ತಯಾರಿಸುವುದು ಸೇರಿದಂತೆ ಸಣ್ಣ ಮತ್ತು ಗುಡಿ ಕೈಗಾರಿಕೆಗಳನ್ನು ಸ್ಥಾಪಿಸಿಕೊಂಡರೆ ನಿರುದ್ಯೋಗ ಸಮಸ್ಯೆ ನಿವಾರಿಸಬಹುದು ಎಂದರು.
ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯು ಹಿಂದುಳಿದ ಸಮುದಾಯಕ್ಕೆ ಸಾಕಷ್ಟು ಸವಲತ್ತು ನೀಡುತ್ತಿದೆ. ತಾಲೂಕಿನ ಮೂರು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1.5 ಲಕ್ಷ ರು. ಸಾಲ ನೀಡುತ್ತಿದೆ. ಇದರಲ್ಲಿ ಶೇ. 25ರಷ್ಟು ಸಬ್ಸಿಡಿ ದೊರಕಲಿದೆ. ಇನ್ನುಳಿದ ಶೇ. 75ರಷ್ಟು ಸಾಲದ ಮೊತ್ತವನ್ನು ನಿಗಧಿತ ಅವಧಿಯೊಳಗೆ ಸರ್ಕಾರಕ್ಕೆ ಮರುಪಾವತಿ ಮಾಡಿ ಮಹಿಳೆಯರು ಅಭಿವೃದ್ಧಿ ಸಾಧಿಸಬೇಕು ಎಂದು ಹೇಳಿದರು. ತಾಲೂಕಿನ ಬೆಳ್ಳೂರು ವರಹಾದೇವಿ ಸ್ತ್ರೀ ಶಕ್ತಿ ಸಂಘ, ದಡಗ ಗ್ರಾಮದ ಪದ್ಮಾಂಭ ಸ್ತ್ರೀ ಶಕ್ತಿ ಸಂಘ ಹಾಗೂ ಬಿಂಡಿಗನವಿಲೆಯ ಬಿಸ್ಮಿಲ್ಲಾ ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1.5 ಲಕ್ಷ ರು ಚೆಕ್ ವಿತರಣೆ ಮಾಡಲಾಯಿತು. ತಾಲೂಕು ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಚಾಮಲಾಪುರ ಯಶೋಧಮ್ಮ, ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ಜಿಲ್ಲಾ ವ್ಯವಸ್ಥಾಪಕ ಎನ್.ಜಿ. ಚನ್ನಿಗರಾಯಪ್ಪ, ಅಧಿಕಾರಿ ಆಶಾ, ಮಹಿಳಾ ಸಂಘದ ಸದಸ್ಯರು ಹಾಜರಿದ್ದರು.