ಮೌಲ್ಯರಹಿತ ಪ್ರಜಾಪ್ರಭುತ್ವ
ತುಮಕೂರು: ಪ್ರಜಾಪ್ರಭುತ್ವ ಮೌಲ್ಯ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ. ಆದರೆ ತಪ್ಪನ್ನು ತಿದ್ದಿಕೊಳ್ಳಲು ಪ್ರಜಾಪ್ರಭುತ್ವದಲ್ಲಿ ಅವಕಾಶವಿರುವುದು ಗಮನಾರ್ಹ ಸಂಗತಿ ಎಂದು ಸಚಿವ ಟಿ.ಬಿ. ಜಯಚಂದ್ರ ಅಭಿಪ್ರಾಯಪಟ್ಟರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ಜಿಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವ ಎಲ್ಲ ಅಂಗಗಳಲ್ಲೂ ಗೊಂದಲಗಳಿವೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಹಾಗೂ ಪತ್ರಿಕಾ ರಂಗಗಳೆಲ್ಲದರಲ್ಲೂ ಮೌಲ್ಯಗಳು ಕಡಿಮೆಯಾಗುತ್ತಿವೆ. ಎಚ್ಚರಿಕೆ ವಹಿಸಬೇಕಾದ ತುರ್ತು ಬಂದೊದಗಿದೆ.
ಯಾವುದೇ ಅಂಗ ತನಗಿರುವ ಸ್ವಾತಂತ್ರ್ಯವನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಸಮಾಜವನ್ನು ಹಾಗೂ ಆಡಳಿತವನ್ನು ತಪ್ಪು ದಾರಿಗೆ ಹೋಗದಂತೆ ಸರಿದಾರಿಗೆ ತೆಗೆದುಕೊಂಡು ಹೋಗಬೇಕಾದ ಹೊಣೆಗಾರಿಕೆ ಪತ್ರಿಕಾ ರಂಗದ್ದಾಗಿದೆ. ವಾಸ್ತವಾಂಶ ಬರೆದಾಗ ಪತ್ರಿಕಾ ರಂಗದ ಮೌಲ್ಯ ಹೆಚ್ಚಾಗುತ್ತದೆ. ಆದರೆ ಆ ಪತ್ರಿಕಾ ರಂಗವೇ ದಾರಿ ತಪ್ಪಿದರೇ ಏನು ಮಾಡುವುದು ಎಂದು ಮಾರ್ಮಿಕವಾಗಿ ಪ್ರಶ್ನಿಸಿ, ಎಡಿಜಿಪಿ ರವೀದ್ರನಾಥ್ ಪ್ರಕರಣವನ್ನು ಉದಾಹರಿಸಿದರು. ಇಂದು ಪ್ರಜಾಪ್ರಭುತ್ವದ ಎಲ್ಲ ಅಂಗಗಳಲ್ಲೂ ವಿಶ್ವಾಸಾರ್ಹತೆ ಕೊರತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ಈ ಅಂಗಗಳಿಗೆ ಶಕ್ತಿ ತುಂಬಿ ಅವುಗಳನ್ನು ಸರಿದಾರಿಗೆ ತರುವ ಪ್ರಯತ್ನವನ್ನು ಎಲ್ಲರೂ ಸೇರಿ ಮಾಡಬೇಕಿದೆ ಎಂದರು.
ಇಂತಹದೊಂದು ಬದಲಾವಣೆ ತರುವ ಪ್ರಯತ್ನವನ್ನು ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದರ ಅಂಗವಾಗಿಯೇ ವಿಧಾನಮಂಡಲದಲ್ಲಿ ಪ್ರತಿಯೊಬ್ಬ ಸಚಿವರೂ ತಮ್ಮ ಖಾತೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಆ ಸಚಿವರೇ ಉತ್ತರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗುತ್ತದೆ. ಜತೆಗೆ ಜನ ನಂಬುವ ಕೆಲಸ ಮಾಡಬೇಕು. ವಿಧಾನ ಮಂಡಲ ಅಧಿವೇಶನವನ್ನು ಕನಿಷ್ಠ 60 ದಿವಸಗಳ ಕಾಲ ನಡೆಯಬೇಕು. ಪ್ರಮುಖ ವಿಷಯಗಳು ಚರ್ಚೆಯಾಗಬೇಕು ಎಂದರು.