ರೈತರಿಗೆ ಮೇವು ಕತ್ತರಿಸುವ ಯಂತ್ರ ವಿತರಣೆ
ಚಿಕ್ಕಬಳ್ಳಾಪುರ: ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ವತಿಯಿಂದ ರೈತರಿಗೆ ಗಿರಿರಾಜಕೋಳಿ ಮತ್ತು ಮೇವು ಕತ್ತರಿಸುವ ಯಂತ್ರಗಳನ್ನು ವಿತರಿಸಿದರು.
ನಗರದ ಪಶು ವೈದ್ಯ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ಫಲಾನುಭವಿಗಳು ಗಿರಿರಾಜ ಕೋಳಿ ಮತ್ತು ಮೇವು ಕತ್ತರಿಸುವ ಯಂತ್ರಗಳನ್ನು ಪಡೆದುಕೊಂಡರು.
ಕೃಷಿಗೆ ಪೂರಕವಾದ ಹೈನೋದ್ಯಮದಲ್ಲಿ ರೈತರು ತೊಡಗಿಸಿಕೊಳ್ಳುವುದರಿಂದ ಇನ್ನೂ ಹೆಚ್ಚಿಗೆ ಆರ್ಥಿಕ ಲಾಭವನ್ನು ಗಳಿಸಬಹುದು. ಮಳೆ ಮತ್ತು ಬೆಳೆ ಸಮಸ್ಯೆಯ ನಡುವೆ ಹೈನೋದ್ಯಮ ಕೈ ಹಿಡಿಯುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಮೇವಿಗೆ ಸಮಸ್ಯೆ ಉಂಟಾಗಿದೆ. ಬೇಡಿಕೆ ಹೆಚ್ಚಳವಾಗಿ ಸಮಸ್ಯೆಗಳು ಉಂಟಾದಾಗ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಬೇಕೆಂದು ತಾ.ಪಂ. ಅಧ್ಯಕ್ಷ ಪಿ.ಎ. ಮೋಹನ್ ತಿಳಿಸಿದರು.
ಸರ್ಕಾರ ನೀಡುವ ಸವಲತ್ತುಗಳ ಬಗ್ಗೆ ರೈತರು ಅರಿತು ಸದುಪಯೋಗಪಡಿಸಿಕೊಳ್ಳಬೇಕು. ಈ ಮೂಲಕ ಪ್ರಗತಿಯನ್ನು ಸಾಧಿಸಬೇಕು. ಆಗ ಸರ್ಕಾರದ ಯೋಜನೆಗಳ ಜಾರಿಗೆಗೆ ಸಾರ್ಥಕತೆ ಬರುತ್ತದೆ ಎಂದ ಅವರು, ಮೇವು ಕತ್ತರಿಸುವ ಯಂತ್ರಗಳನ್ನು ಸ್ವಸಹಾಯ ಸಂಘಗಳಿಗೆ ನೀಡಿದರೆ ಆ ಸಂಘಗಳಲ್ಲಿನ ರೈತ ಮಹಿಳೆಯರು ಹೆಚ್ಚಿಗೆ ಅನುಕೂಲ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಕೇವಲ ಒಬ್ಬ ರೈತನಿಗೆ ಮಾತ್ರ ಯಂತ್ರ ನೀಡಿದರೆ ಆತನ ಮನೆಗೆ ಮಾತ್ರ ಉಪಯೋಗವಾಗುತ್ತದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕೆಂದರು.
ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಶಿವರಾಂ ಮಾತನಾಡಿ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗಿರಿರಾಜ ಕೋಳಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ಜಿಲ್ಲೆಯಲ್ಲಿ 3300 ಕೋಳಿಗಳನ್ನು ವಿತರಿಸಲು ಗುರಿ ಹೊಂದ ಲಾಗಿದೆ ಈಗಾಗಲೇ ಜಿಲ್ಲೆಯ 3 ತಾಲ್ಲೂಕುಗಳಲ್ಲಿ ವಿತರಿಸಲಾಗಿದೆ. ಕಳೆದ ವರ್ಷ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲಿ ಪ್ರತಿ ಫಲಾನುಭವಿಗೆ 10 ಕೋಳಿಗಳನ್ನು ವಿತರಿಸಲಾಗಿತ್ತು ಎಂದರು.
ಜಿಲ್ಲೆಯಲ್ಲಿ ಮೇವಿಗೆ ಅಭಾವ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಪ್ರತಿಯೊಂದು ತಾಲೂಕಿನಲ್ಲಿ 21 ಮಂದಿ ಫಲಾನುಭವಿಗಳಿಗೆ ಉಚಿತವಾಗಿ ಮೇವಿನ ಯಂತ್ರಗಳನ್ನು ವಿತರಿಸಲಾಗುತ್ತಿದೆ. ಮೊದಲನೇ ಹಂತದಲ್ಲಿ 12 ಮಂದಿಗೆ ವಿತರಿಸಲಾಗಿದೆ. ಎರಡನೇ ಹಂತದಲ್ಲಿ 9 ಮಂದಿಗೆ ವಿತರಿಸಲಾಗುವುದು ಎಂದರು.
ಗಿರಿರಾಜ ಕೋಳಿ ಸಾಕಾಣಿಕೆಯಿಂದ ಹೆಚ್ಚಿನ ಲಾಭ ದೊರೆಯುತ್ತದೆ. ಈ ಕೋಳಿಗಳು ವಾರ್ಷಿಕ 120 ಕ್ಕೂ ಹೆಚ್ಚು ಮೊಟ್ಟೆಗಳನ್ನಿಡುತ್ತವೆ.ಇವುಗಳನ್ನು ಮನೆಯ ಹಿಂಭಾಗದಲ್ಲಿ ಸುಲಭವಾಗಿ ಬೆಳೆಸಬಹುದಾಗಿದೆ ಎಂದರು.
ತಾ.ಪಂ.ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಪಶುಪಾಲನಾ ಇಲಾಖೆಯ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಗೋವಿಂದಪ್ಪ, ತಾಲೂಕು ಸಹಾಯಕ ನಿರ್ದೇಶಕ ವಿಜಯ್ ಪ್ರಕಾಶ್, ಪಶು ವೈದ್ಯಾಧಿಕಾರಿ ಡಾ. ಜ್ಞಾನೇಶ್, ಡಾ. ಮಧುರನಾಥರೆಡ್ಡಿ, ಕಾಂಗ್ರೆಸ್ ಮುಖಂಡ ಶ್ರೀಧರ್ ಉಪಸ್ಥಿತರಿದ್ದರು.