ಅನಧಿಕೃತ ಶಾಲೆಗೆ ಬೀಗ ಮುದ್ರೆ
ಕುಣಿಗಲ್: ಶಿಕ್ಷಣ ಇಲಾಖೆಯಿಂದ ಯಾವುದೇ ಮಾನ್ಯತೆ ಪಡೆಯದೆ ಅನಧಿಕೃತವಾಗಿ ನಡೆಯುತ್ತಿದ್ದ ತಾಲೂಕಿನ ಭಕ್ತರಹಳ್ಳಿ ಗ್ರಾಮದ ಕೆ.ಕೆ.ಇಂಟರ್ ನ್ಯಾಷನಲ್ ಶಾಲೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಂಗಳವಾರ ಪೊಲೀಸ್ ರಕ್ಷಣೆಯಲ್ಲಿ ದಾಳಿ ನಡೆಸಿ ಶಾಲೆ ಮುಚ್ಚಿಸಿದರು. ಶಾಲೆಯಲ್ಲಿದ್ದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಪೋಷಕರಿಗೆ ಸೂಚಿಸಿದರು.
ತಾಲೂಕಿನ ಕೊತ್ತಗೆರೆ ಹೋಬಳಿಯ ಭಕ್ತರಹಳ್ಳಿ ಗ್ರಾಮದಲ್ಲಿ ಬೆಂಗಳೂರು ಮೂಲಕ ಶಿಕ್ಷಣ ಸಂಸ್ಥೆ ಹೆಸರಿನಲ್ಲಿ ಕೆ.ಕೆ.ಇಂಟರ್ ನ್ಯಾಷನಲ್ ಸ್ಕೂಲ್ ಪ್ರಾರಂಭಿಸಲಾಗಿತ್ತು. ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೂ ಆಂಗ್ಲ ಮಾಧ್ಯಮದಲ್ಲಿ ಕೇಂದ್ರೀಯ ಪಠ್ಯಕ್ರಮದ ಬೋಧನೆ ಎಂದು ಆಕರ್ಷಕ ಕರಪತ್ರಗಳನ್ನು ಹಂಚಿ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗಿತ್ತು. ಆದರೆ ಈ ಶಾಲೆ ಶಿಕ್ಷಣ ಇಲಾಖೆಯಿಂದ ಮಾನ್ಯತೆ ಪಡೆದಿರಲಿಲ್ಲ. ಹೀಗಾಗಿ ಈ ಶಾಲೆಗೆ ಮಕ್ಕಳನ್ನು ಸೇರಿಸಬಾರದೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಲವಾರು ಬಾರಿ ಪ್ರಕಟಣೆ ನೀಡಿ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರು.
ಭಕ್ತರಹಳ್ಳಿ ಗ್ರಾಮಸ್ಥರು ಈ ಖಾಸಗಿ ಶಾಲೆಯು ಸರ್ಕಾರಿ ಶಾಲೆಗೆ ಹತ್ತಿರದಲ್ಲಿದ್ದು ಪ್ರಾರಂಭದಲ್ಲಿ ಉಚಿತವಾಗಿ ಶಿಕ್ಷಣ ನೀಡುವ ಆಮಿಷ ನೀಡಿ ಯಾವುದೇ ಮೂಲಭೂತ ಸೌಲಭ್ಯ ಇಲ್ಲದೆ ಹೆಸರಿಗಷ್ಟೆ ಇಂಟರ್ ನ್ಯಾಷನಲ್ ಸ್ಕೂಲ್ ಎಂದು ನಾಮಫಲಕ ಹಾಕಿಕೊಂಡಿದೆ. ಅಲ್ಲದೆ, ಮಾನ್ಯತೆ ಪಡೆಯದೆ ಶಾಲೆ ನಡೆಯುತ್ತಿರುವುದನ್ನು ಖಂಡಿಸಿ ತಾಲೂಕು, ಜಿಲ್ಲಾ ಮಟ್ಟದ ಶಿಕ್ಷಣಾಧಿಕಾರಿಗಳಿಗೆ ಅನಧಿಕೃತ ಶಾಲೆ ಮುಚ್ಚಿಸಲು ಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅನಧಿಕೃತ ಶಾಲಾಡಳಿತ ಮಂಡಳಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೆ, ಸ್ಥಳೀಯ ಠಾಣೆಗೂ ದೂರು ನೀಡಿ ಕ್ರಮಕ್ಕೆ ಮುಂದಾದರೂ ಶಾಲಾಡಳಿತ ಮಂಡಳಿ ಯಾವುದೇ ಕ್ರಮಕ್ಕೆ ಮುಂದಾಗದೆ ನಡೆಸುತ್ತಿತ್ತು.
ಇದರಿಂದ ಬೇಸತ್ತ ಗ್ರಾಮಸ್ಥರು ಸರ್ಕಾರಿ ಶಾಲೆಯ ಉಳಿವಿಗಾಗಿ ಅನಧಿಕೃತ ಶಾಲೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಕೈಗೊಳ್ಳುವ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜಿ.ಸಿದ್ದಯ್ಯ, ಸಿಬ್ಬಂದಿ ರಂಗನಾಥ್, ಅಜೀಜ್ ಅವರೊಂದಿಗೆ ಪಿಎಸೈ ಹರೀಶ್ ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣೆಯಲ್ಲಿ ಮಂಗಳವಾರ ಶಾಲೆ ಮೇಲೆ ದಾಳಿ ನಡೆಸಿ, ವ್ಯಾಸಂಗ ಮಾಡುತ್ತಿದ್ದ ಮಕ್ಕಳಿಗೆ ಅವರ ಈ ಹಿಂದಿನ ಶಾಲೆಯಲ್ಲೇ ವ್ಯಾಸಂಗ ಮಾಡಲು ಕ್ರಮ ಕೈಗೊಳ್ಳುವಂತೆ ಪೋಷಕರಿಗೂ ತಿಳಿವಳಿಕೆ ನೀಡಿ, ಶಾಲೆಯ ಕೊಠಡಿಗಳಿಗೆ ಬೀಗ ಹಾಕಿದರು.
ಈ ಬಗ್ಗೆ ವಿವರ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಜಿ.ಸಿದ್ದಯ್ಯ, ಈ ಶಾಲೆಯು ಮಾನ್ಯತೆ ಪಡೆಯದಿರುವ ಬಗ್ಗೆ ಕಳೆದ ಮೂರು ತಿಂಗಳಿನಿಂದಲೂ ನಾಲ್ಕಕ್ಕೂ ಹೆಚ್ಚು ನೋಟಿಸ್ ಜಾರಿ ಮಾಡಲಾಗಿದೆ. ಶಾಲಾ ಮಕ್ಕಳನ್ನು ನೆರೆಯ ಮಾಗಡಿ ತಾಲೂಕು ಸೇರಿದಂತೆ ವಿವಿಧೆಡೆಯಿಂದ ಖಾಸಗಿ ಬಸ್ನಲ್ಲಿ ಸಾರಿಗೆ ಇಲಾಖೆಯಿಂದ ಅನುಮತಿ ಇಲ್ಲದೆ ಕರೆತರುತ್ತಿದ್ದು, ಶಾಲೆಯಲ್ಲಿ ಸೂಕ್ತ ಮೂಲಭೂತ ಸೌಕರ್ಯ ಇಲ್ಲದೆ ಸುತ್ತಮುತ್ತಲೂ ನೂರಾರು ಹುತ್ತಗಳಿದ್ದು ಮಕ್ಕಳಿಗೆ ಅಪಾಯಕಾರಿ ವಾತವರಣವಿದೆ. ಮಾನ್ಯತೆ ಇಲ್ಲದ ಕಾರಣ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ ಇಲಾಖೆ ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ ಎಂದರು.