ತಾಪಂನಲ್ಲಿನ್ನು ಸ್ಕೂಲ್ ಸುಬ್ಬರೆಡ್ಡಿ ಪಾಠ
ಚಿಂತಾಮಣಿ: ಗ್ರಾಮೀಣ ಜನರಿಗೆ ಮೂಲಸೌಲಭ್ಯಗಳಿಗೆ ಆಧ್ಯತೆ ನೀಡುವುದಾಗಿ ನೂತನ ಅಧ್ಯಕ್ಷ ಗುಂದಿಗೆರೆ ಸ್ಕೂಲ್ ಸುಬ್ಬರೆಡ್ಡಿ ಹೇಳಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ತಾಪಂ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಇರಗಂಪಲ್ಲಿ ತಾಪಂ ಕ್ಷೇತ್ರದ ಸ್ಕೂಲ್ ಸುಬ್ಬರೆಡ್ಡಿ ಅಧ್ಯಕ್ಷರಾಗಿ ಹಾಗೂ ಎನ್. ಕೊತ್ತೂರು ಕ್ಷೇತ್ರದ ರೆಡ್ಡೆಮ್ಮಶ್ರೀರಾಮ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದಾಗಿ ಉಪ ವಿಭಾಗಾಧಿಕಾರಿ ಕೆ.ಟಿ. ಶಾಂತಲಾ ಅವರು ಘೋಷಣೆ ಮಾಡಿದರು.
ಮಾಜಿ ಶಾಸಕ ಎಂ.ಸಿ. ಸುಧಾಕರ್ ಸೂಚನೆ ಮೇರೆಗೆ ಎಲ್ಲ 14 ಸದಸ್ಯರ ಬೆಂಬಲದಿಂದ ತಾಪಂ ಮಾಜಿ ಶಾಸಕರ ಕೈವಶವಾಯಿತು.
ತೀವ್ರ ಪೈಪೋಟಿ: ತಾಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ದಿನಾಂಕ ನಿಗದಿ ಪಡಿಸುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಶಾಸಕ ಸುಧಾಕರ್ ಬೆಂಬಲಿತ ಊಲವಾಡಿ ಸುಬ್ರಮಣಿ, ಸ್ಕೂಲ್ ಸುಬ್ಬರೆಡ್ಡಿ ಮತ್ತು ನಾಗರಾಜ್ ನಡುವೆ ಲಾಬಿ ನಡೆಯಿತು. ಹಿರಿಯರಾದ ಸುಬ್ಬರೆಡ್ಡಿಯವರನ್ನೇ ಅಧ್ಯಕ್ಷ ಮಾಡಲು ಮಾಜಿ ಶಾಸಕರ ಮೇಲೆ ಒತ್ತಡ ಬೀರಿದ ಪರಿಣಾಮ ಸುಧಾಕರ್ ಹಸಿರು ನಿಶಾನೆ ತೋರಿಸಿದರು ಎನ್ನಲಾಗಿದೆ.
ಬಿಗಿ ಬಂದೋಬಸ್ತ್: ನಗರದ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಮಂಗಳವಾರ ವೃತ್ತ ನಿರೀಕ್ಷಕ ನಂಜಪ್ಪ ನೇತೃತ್ವದಲ್ಲಿ ತಾಪಂ ಕಚೇರಿ ಸುತ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ವಿಜಯೋತ್ಸವ: ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಹಿನ್ನೆಲೆಯಲ್ಲಿ ಮಾಜಿ ಶಾಸಕ ಸುಧಾಕರ್ ಬೆಂಬಲಿಗರು ತಾಪಂ ಕಚೇರಿಯಿಂದ ಜೋಡಿರಸ್ತೆ ಮುಖಾಂತರ ಮಾಳಪ್ಪಲ್ಲಿಯ ಮಾಜಿ ಶಾಸಕ ಸುಧಾಕರ್ ಮನೆಯವರೆಗೂ ವಿಜಯೋತ್ಸವ ಮೆರವಣಿಗೆ ಆಚರಿಸಿದರು. ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ವಸಂತ್ ಕುಮಾರ್, ಕೋಮುಲ್ ನಿರ್ದೇಶಕ ಊಲವಾಡಿ ಬಾಬು, ತಾಪಂ ಸದಸ್ಯರಾದ ಸುಲ್ತಾನ್ ಷರೀಫ್, ಕೆ.ವಿ. ಮೀನಾ ಭಾಗವಹಿಸಿದ್ದರು.
ಬಂದೋಬಸ್ತ್ನಲ್ಲಿ ಸುಧಾಕರ ಬೆಂಬಲಿಗರು!
ಚಿಂತಾಮಣಿ: ತಾಪಂ ಅಧ್ಯಕ್ಷಗಿರಿಗೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆ ಇದೆ ಎಂಬ ಆತಂಕದಿಂದ ಮಾಜಿ ಶಾಸಕ ಎಂ.ಸಿ. ಸುಧಾಕರ್ ಬೆಂಬಲಿತ 14 ಸದಸ್ಯರನ್ನು ಸೂಕ್ತ ಬಂದೋಬಸ್ತ್ನಲ್ಲಿ ಕರೆತರಲಾಗಿತ್ತು. ಸಂಸದ ಕೆ.ಎಚ್. ಮುನಿಯಪ್ಪ ರಾಜಕೀಯ ತಂತ್ರಗಾರಿಕೆ ರೂಪಿಸಿದ್ದು ಸುಧಾಕರ ಬೆಂಬಲಿತ ಸದಸ್ಯರನ್ನು ಹಣ ನೀಡಿ ಖರೀದಿಸುವ ಸಾಧ್ಯತೆ ಇದೆ ಎಂದು ಕಳೆದ ಕೆಲವು ದಿನಗಳಿಂದ ಪ್ರವಾಸಕ್ಕೆ ಕಳುಹಿಸಲಾಗಿತ್ತು. ಮಂಗಳವಾರ ಚುನಾವಣೆ ನಡೆಯುವ ವೇಳೆ ಬಿಗಿ ಬಂದೋಬಸ್ತ್ನಲ್ಲಿ ಕರೆತಂದು ಮತ ಚಲಾವಣೆ ಮಾಡಿಸಲಾಯಿತು.
ಜಾತಿ ರಾಜಕೀಯ ಮಾಡುತ್ತಿರುವ ಕೆಎಚ್ಎಂ
ಚಿಂತಾಮಣಿ: ಜಾತಿ ರಾಜಕೀಯದಿಂದ ಸಮಾಜ ಒಡೆಯುತ್ತಿರುವ ಕಾಂಗ್ರೆಸ್ ಸಂಸದ ಕೆ.ಎಚ್. ಮುನಿಯಪ್ಪ ಕುತಂತ್ರಕ್ಕೆ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸಲಾಗುವುದೆಂದು ಮಾಜಿ ಶಾಸಕ ಎಂ.ಸಿ. ಸುಧಾಕರ್ ಆರೋಪಿಸಿದರು. ಮಾಳಪ್ಪಲ್ಲಿಯ ಅಂಜನಿ ನಿವಾಸದಲ್ಲಿ ನೂತನವಾಗಿ ಆಯ್ಕೆಗೊಂಡ ತಾಪಂ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಹಣದಿಂದ ಜನರನ್ನು ಖರೀದಿ ಮಾಡಲು ನಮ್ಮ ಬೆಂಬಲಿಗರಲ್ಲಿ ಬಿನ್ನಾಭಿಪ್ರಾಯ ಮೂಡಿಸಿ ವಿಫಲಗೊಂಡು, ಜಾತಿ ರಾಜಕೀಯ ಮಾಡುತ್ತಿರುವ ಕೆ.ಎಚ್. ಮುನಿಯಪ್ಪರಿಗೆ ಮುಖಭಂಗವಾಗಿದೆಯೆಂದು ಲೇವಡಿ ಮಾಡಿದರು. ಚಿಲಕಲನೇರ್ಪು ಹೋಬಳಿಗೆ ಸೇರಿದ ಮಾಜಿ ಸಚಿವ ವಿ. ಮುನಿಯಪ್ಪ ಬೆಂಬಲಿತ ಮೂವರು ತಾಪಂ ಸದಸ್ಯರು ಹಾಗೂ ಜೆಡಿಎಸ್ನ ಒಬ್ಬ ಸದಸ್ಯ ಬೆಂಬಲ ನೀಡಿರುವುದು ಶ್ಲಾಘನೀಯ ಎಂದರು.