ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೋಲಾರ

ಸರ್ಕಾರಿ ಕೌನ್ಸೆಲಿಂಗ್ ವ್ಯವಸ್ಥೆ ವಿರುದ್ಧ ಎಬಿವಿಪಿ ಪ್ರತಿಭಟನೆ

Vishwanath S
Updated On : 16 Jul 2014, 1:06 am

ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯಿಂದ ಬಡ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ನಲ್ಲಿ ಸಿಗಬೇಕಾದ ಸರ್ಕಾರಿ ಕೋಟಾ ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗುತ್ತಿವೆ. ಈ ಗೊಂದಲದ ಕೌನ್ಸೆಲಿಂಗ್‌ನಿಂದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ ಎಂದು ಎಬಿವಿಪಿ ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ಒಳ ಒಪ್ಪಂದ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ತನಗೆ ನೀಡಿರುವ ಜವಾಬ್ದಾರಿ ಹಾಗೂ ಪಾರದರ್ಶಕ ನ್ಯಾಯಯುತ ಕೌನ್ಸೆಲಿಂಗ್ ಮೂಲಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದ ಸೀಟು ಹಂಚಿಕೆ ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದು ಲಕ್ಷಾಂತರ ರುಪಾಯಿ ಅಕ್ರಮ ದಂಧೆಗೆ ಕಾರಣವಾಗಿದೆ ಎಂದು ಟೀಕಿಸಿದೆ.  
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ಪ್ರತಿಭಟನಾ ಮೆರವಣಿಗೆ ಹೊರಟು ಉಪ ವಿಭಾಗಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಎಬಿವಿಪಿ ಮುಖಂಡರು ಮತ್ತು ವಿದ್ಯಾರ್ಥಿಗಳು, ಕೂಡಲೇ ಕೌನ್ಸೆಲಿಂಗ್ ಮೂಲಕ ನಡೆಯುತ್ತಿರುವ ದಂಧೆಗೆ ಕಡಿವಾಣ ಹಾಕಿ ಬಡ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಒತ್ತಾಯಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಮಂಜುನಾಥರೆಡ್ಡಿ ಮಾತನಾಡಿ, ಕೆಲವು ಪ್ರತಿಷ್ಠಿತ ಕಾಲೇಜುಗಳನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸದೇ ವಿದ್ಯಾರ್ಥಿಗಳಿಗೆ ಕಾಲೇಜು ಆಯ್ಕೆಯಲ್ಲಿ ಕಳೆದ ಬಾರಿ ಇದ್ದ ಹಲವು ಅವಕಾಶಗಳನ್ನು ಈ ಬಾರಿ ಕಡಿಮೆಗೊಳಿಸಿರುವುದು ಖಂಡನೀಯ. ಕಾಲೇಜುಗಳಲ್ಲಿ ಸರ್ಕಾರಿ ಕೋಟಾ ಸೀಟುಗಳಿಗೆ ಹೆಚ್ಚುವರಿಯಾಗಿ 20 ಸಾವಿರದಿಂದ 80 ಸಾವಿರವರೆಗೆ ಶುಲ್ಕ ವಸೂಲಿ ಮಾಡುತ್ತಿರುವುದು ಹಗಲು ದರೋಡೆಯಾಗಿದೆ. ಹೀಗಿದ್ದರೂ ಉನ್ನತ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರು ಮೌನವಹಿಸಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ ಎಂದು ಆರೋಪಿಸಿದರು.
ಟೀಕೆಗಳು, ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದರೂ ವೈದ್ಯಕೀಯ ಸಚಿವ ಶರಣಪ್ರಕಾಶ್ ಪಾಟೀಲ್  ಸಿಇಟಿ ಕೇಂದ್ರಕ್ಕೆ ಹೋಗಿ ವಿದ್ಯಾರ್ಥಿಗಳ ಕುಂದು ಕೊರತೆಯನ್ನು ಆಲಿಸಿಲ್ಲ. ರಾಜ್ಯಾದ್ಯಂತ ಕೆಇಎನಲ್ಲಿ ಸೀಟು ಬ್ಲಾಕಿಂಗ್ ನಡೆಯುತ್ತಿರುವುದರಿಂದ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರೂ ಸರ್ಕಾರ ಏಕೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಅಕ್ರಮವಾಗಿ ರಾತ್ರೋ ರಾತ್ರಿ ಮೆಡಿಕಲ್ ಕೌನ್ಸೆಲಿಂಗ್ ನಡೆಸಿರುವ ಹಾಗೂ ಖಾಸಗಿ ಕಾಲೇಜುಗಳಿಗೆ ಅತ್ಯಮೂಲ್ಯ ಸೀಟುಗಳನ್ನು ಹಿಂದಿರುಗಿಸಿರುವ ಬಗ್ಗೆ ಸಮಗ್ರ ತನಿಖೆಯಾಗಬೇಕು. ಕಟ್ಟ ಕಡೆಯ ಅಂತ್ಯಕ್ಕೆ ಕೌನ್ಸೆಲಿಂಗ್‌ಗೆ ಬಂದರೂ ಕಳೆದ ಬಾರಿಗಿಂತ ಸುಮಾರು 1650ಕ್ಕೂ ಹೆಚ್ಚಿನ ಮೆಡಿಕಲ್ ಸೀಟುಗಳು ಪ್ರಕಿಯೆಯಲ್ಲಿ ಬಂದಿಲ್ಲ. ಕೂಡಲೇ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಎಲ್ಲಾ ಕೌನ್ಸೆಲಿಂಗ್‌ನಲ್ಲಿಯೂ ವಿದ್ಯಾರ್ಥಿಗಳ ಪರವಾದ ಆಫ್‌ಲೈನ್ ಕೌನ್ಸೆಲಿಂಗ್ ನಡೆಸಬೇಕು. ಸರ್ಕಾರಿ ಕೋಟಾದ ಸೀಟು ಪಡೆದ ವಿದ್ಯಾರ್ಥಿಗಳಿಗೆ ಆಕ್ರಮವಾಗಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಪಡಿಸಬೇಕು. ಜೊತೆಗೆ ದಂಡವನ್ನು ವಿಧಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮುರಳಿ, ವಿದ್ಯಾರ್ಥಿ ಮುಖಂಡರಾದ ಲಕ್ಷ್ಮೀ, ವರ್ಷಿಣಿ, ಝಾನ್ಸಿ, ಮಮತಾ ಮುಂತಾದವರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement