ಖಾಸಗಿ ಬಸ್ ಮಾಲೀಕರಿಗೆ ಆಯುಕ್ತರ ಬುದ್ಧಿವಾದ
ಚಿಕ್ಕಬಳ್ಳಾಪುರ: ಸಂಚಾರದ ವಿಷಯದಲ್ಲಿ ಸಣ್ಣಪುಟ್ಟ ಕಾರಣಗಳಿಗೂ ಗಲಾಟೆ ಮಾಡಿಕೊಳ್ಳುತ್ತಿದ್ದ ಖಾಸಗಿ ಬಸ್ ಮಾಲೀಕರು ಮತ್ತು ಸಿಬ್ಬಂದಿಗೆ ಸಾರಿಗೆ ಆಯುಕ್ತರು ಬುದ್ಧಿವಾದ ಹೇಳುವುದರ ಜೊತೆಗೆ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.
ಸಂಚಾರಿ ನಿಯಮಗಳಿಗೆ ಅನುಸಾರವಾಗಿ ನಡೆದುಕೊಂಡು ಹೋದರೆ ಮಾತ್ರ ಬಸ್ಸುಗಳಿಗೆ ಸಂಚರಿಸಲು ಅವಕಾಶ ನೀಡಲಾಗುತ್ತದೆ. ಒಂದು ವೇಳೆ ನಿಯಮಗಳೆನ್ನಲ್ಲಾ ಗಾಳಿಗೆ ತೂರಿ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಪರವಾನಗಿಯನ್ನು ನಿರ್ದಾಕ್ಷಿಣ್ಯವಾಗಿ ರದ್ದುಪಡಿಸಲಾಗುತ್ತದೆ ಎನ್ನುವ ಸಂದೇಶ ರವಾನಿಸಿದ್ದಾರೆ.
ಚಿಂತಾಮಣಿ ತಾಲೂಕಿನಲ್ಲಿ ಖಾಸಗಿ ಬಸ್ ಮಾಲೀಕರುಗಳ ನಡುವೆ ಗಲಾಟೆಗಳು ನಡೆದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಕೇಂದ್ರ ಸಾರಿಗೆ ಆಯುಕ್ತ ಸತ್ಯನಾರಾಯಣ ಪ್ರಸಾದ್ ಅವರು, ಚಿಕ್ಕಬಳ್ಳಾಪುರ ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಚಿಂತಾಮಣಿ ತಾಲೂಕಿನ ಖಾಸಗಿ ಬಸ್ ಮಾಲೀಕರ ಸಭೆಯನ್ನು ಕರೆದು ಮಾತುಕತೆ ನಡೆಸಿದರು.
ಕಟ್ಟುನಿಟ್ಟಿನ ಎಚ್ಚರಿಕೆ: ಅನೇಕ ಖಾಸಗಿ ಬಸ್ಗಳು ಇಲಾಖೆಯಿಂದ ಪರವಾನಗಿ ಪಡೆದುಕೊಂಡಿರುವ ಮಾರ್ಗದಲ್ಲಿ ಸಂಚರಿಸುತ್ತಿಲ್ಲ. ಬೇರೆ ಬೇರೆ ಮಾರ್ಗದಲ್ಲಿ ಓಡಾಡುತ್ತಿವೆ. ಅಲ್ಲದೇ ಒಂದೇ ಪರವಾನಗಿಯಲ್ಲಿ ಎರಡ್ಮೂರು ಬಸ್ಗಳನ್ನು ಓಡಿಸುವುದೂ ಸಹ ಕಂಡು ಬರುತ್ತಿದೆ. ಇದಕ್ಕೆ ಮಾಲೀಕರುಗಳು ಇತಿಶ್ರೀ ಹಾಡಬೇಕು. ನಿಗದಿತ ಮಾರ್ಗದಲ್ಲಿಯೇ ಖಾಸಗಿ ಬಸ್ಗಳು ಸಂಚರಿಸಬೇಕೆಂಬ ಕಟ್ಟುನಿಟ್ಟಿನ ಸೂಚನೆಯನ್ನು ನೀಡಲಾಯಿತು.
ಪ್ರವಾಸ, ಮದುವೆ ಮತ್ತು ಇತರೆ ಕಾರ್ಯಕ್ರಮಗಳಿಗೆ ಬಾಡಿಗೆ ಹೋಗಲು ಅನುಮತಿ ಪಡೆದುಕೊಂಡಿರುವ ಬಸ್ ಗಳು ಸಹ ನಿಯಮಾನುಸಾರ ನಡೆದುಕೊಳ್ಳುತ್ತಿಲ್ಲ. ಪ್ರತಿನಿತ್ಯ ಪ್ರಯಾಣಿಕರನ್ನು ಹತ್ತಿಸಿಕೊಂಡು ಒಂದೇ ಮಾರ್ಗದಲ್ಲಿ ಸಂಚರಿಸುತ್ತಿವೆ. ಈ ಬಗ್ಗೆ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿದ್ದು ಮುಂದಿನ ದಿನಗಳಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಸಿಕ್ಕಿ ಹಾಕಿಕೊಂಡರೆ ದಂಡವನ್ನು ವಿಧಿಸುವುದಲ್ಲದೇ ಕಾನೂನು ನಿಯಮಾನುಸಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿಕೊಡಲಾಯಿತು. ಅಲ್ಲದೇ ಕಾಲ ಕಾಲಕ್ಕೆ ಪರಿಶೀಲನೆ ನಡೆಸಬೇಕು. ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೂ ತಿಳಿಸಲಾಯಿತು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಅಶೋಕ್, ಸಹಾಯಕ ಅಧಿಕಾರಿ ನರಸಪ್ಪ, ಇನ್ಸ್ ಪೆಕ್ಟರ್ಕ್ಮಲ್ ಬಾಬು, ಜಮಾಲುದ್ದೀನ್ ಮುಂತಾದವರು ಉಪಸ್ಥಿತರಿದ್ದರು.